ಕೊಪ್ಪಳ: ಜಿಲ್ಲೆಯಲ್ಲಿ ರೆಮ್ಡೆಸಿವಿರ್ನ್ನು ಕಾಳ ಸಂತೆಯಲ್ಲಿ ಮಾರುತಿದ್ದ ಪ್ರಕರಣ ಕುರಿತಂತೆ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿ ಐವರ ಮೇಲೆ ಈಗಾಗಲೇ ಎಫ್ಐಆರ್ ಮಾಡಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯ ಬಳಿಕ ಹೊರಬರಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಕಾಳ ಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಪ್ರಕರಣ : ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದ ಡಿಸಿ
ಗಂಗಾವತಿ ಹಾಗೂ ಕೊಪ್ಪಳದಲ್ಲಿ ದಾಳಿ ನಡೆಸಿದಾಗ ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ಖಚಿತ ಮಾಹಿತಿ ಆಧರಿಸಿ ಮೇ. 8 ರಂದು ಗಂಗಾವತಿ ಹಾಗೂ ಕೊಪ್ಪಳದಲ್ಲಿ ದಾಳಿ ನಡೆಸಿದಾಗ ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. 20 ಸಾವಿರಕ್ಕೆ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದರು. ಗಂಗಾವತಿಯ ಎರಡು ಆಸ್ಪತ್ರೆ ಹಾಗೂ ಕೊಪ್ಪಳದ ಒಂದು ಆಸ್ಪತ್ರೆಯ ಒಬ್ಬ ಸಿಬ್ಬಂದಿ ಕಾಳ ಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ ಮಾಡುತ್ತಿದ್ದರು. ಈಗ ಕೊಪ್ಪಳದ ಕೆಎಸ್ ಆಸ್ಪತ್ರೆಯ ಪವನ್ ಎಂಬಾತನ ಬಂಧಿಸಲು ಹೋದಾಗ ಡ್ರಾಮಾ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಹೊರಬರಲಿದೆ ಎಂದಿದ್ದಾರೆ.
ಸೋಂಕಿತರಿಗೆ ರೆಮ್ಡೆಸಿವಿರ್ ಅವಶ್ಯವಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಪ್ರತಿ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ನೋಡಿಕೊಳ್ಳಲು ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಸೋಂಕಿತರಿಗೆ ಅವಶ್ಯಕವಿರುವ ಔಷಧವನ್ನು ಜಿಲ್ಲಾಡಳಿತ ಪೂರೈಸುವ ವ್ಯವಸ್ಥೆ ಮಾಡುತ್ತದೆ. ಜನರು ಕಾಳಸಂತೆಯಲ್ಲಿ ಖರೀದಿಸಲು ಮುಂದಾಗಬಾರದು. ಜಿಲ್ಲೆಯಲ್ಲಿ ಇನ್ನೂ 300 ವಾಯಲ್ ರೆಮ್ಡೆಸಿವಿರ್ ಇದೆ. ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು.