ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆಯಲ್ಲಿ ಜೂ.5ರಿಂದ ಆರಂಭವಾಗಲಿರುವ ರಘುವರ್ಯ ತೀರ್ಥರ ಮೂರು ದಿನಗಳ ಆರಾಧನೆ ಹಾಗೂ ಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತ ಬಸವಣ್ಣೆಪ್ಪ ಮುಂದಾಗಿದ್ದಾರೆ. ಜೂನ್ 5, 6 ಮತ್ತು ಏಳು ರಂದು ಮೂರು ದಿನಗಳ ಕಾಲ ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿಮಠದಿಂದ ರಘುವರ್ಯ ತೀರ್ಥರ ಆರಾಧನೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಇದೇ ದಿನ ಮಂತ್ರಾಲಯ ಮಠದಿಂದ ಶ್ರೀ ಮನ್ಯಾಯಸುಧಾ ಸಮರ್ಪಣಾ ಸಂಸ್ಕರಣೋತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಹೀಗಾಗಿ ಉಭಯ ಮಠಗಳು ಸೂಕ್ತ ಭದ್ರತೆ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಈ ಹಿನ್ನೆಲೆ ಯಾವ ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ವಿವಾದದ ಹಿನ್ನೆಲೆ ಉಭಯ ಮಠಗಳ ಅನುಯಾಯಿಗಳ ಸಭೆಯನ್ನು ಇಲ್ಲಿನ ಮಿನಿ ವಿಧಾನಸೌಧದಲ್ಲಿ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ ಉಭಯ ಮಠಗಳ ಅನುಯಾಯಿಗಳು ಮತ್ತು ಭಕ್ತರ ಮಧ್ಯೆ ಒಮ್ಮತ ಮೂಡದ ಹಿನ್ನೆಲೆ ಈ ಸಂಬಂಧ ಸಹಾಯಕ ಆಯುಕ್ತ ಬಸಣ್ಣೆಪ್ಪ ನ್ಯಾಯಾಲಯದಿಂದ ಆದೇಶ ಪಡೆಯದೇ ಹೊರತು ನವವೃಂದಾವನ ಗಡ್ಡೆಯಲ್ಲಿ ಯಾವುದೇ ಧಾರ್ಮಿಕ ಆಚರಣೆ ಕೈಗೊಳ್ಳದಂತೆ ಸೂಚಿಸಿದ್ದಾರೆ.
ಕೋರ್ಟ್ ಅನುಮತಿ ಕಡ್ಡಾಯ:ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ನ್ಯಾಯಾಲಯದಿಂದ ಸೂಕ್ತ ನಿರ್ದೇಶನ ಪಡೆದುಕೊಂಡು ಬರಬೇಕು ಎಂದು ಸೂಚನೆ ನೀಡಿರುವ ಸಹಾಯಕ ಆಯುಕ್ತ ಬಸವಣ್ಣೆಪ್ಪ, ಒಂದೊಮ್ಮೆ ನಿಯಮ ಉಲ್ಲಂಘಿಸಿ ಧಾರ್ಮಿಕ ಆಚರಣೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಿದ್ದಾರೆ. ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂನ್ 5,6 ಮತ್ತು 7 ರಂದು ಪ್ರತಿ ವರ್ಷದಂತೆ ಈ ವರ್ಷವೂ ರಘುವರ್ಯ ತೀರ್ಥರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.