ಕೊಪ್ಪಳ:ಸಾಮಾಜಿಕ ಹೋರಾಟಗಾರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕಿತ್ತೂರಿನಿಂದ ಬಳ್ಳಾರಿವರೆಗೆ ಹಮ್ಮಿಕೊಂಡಿರುವ 'ಚಲಿಸು ಕರ್ನಾಟಕ ಸೈಕಲ್ ಜಾಥಾ' ಇಂದು ಕೊಪ್ಪಳ ನಗರಕ್ಕೆ ಆಗಮಿಸಿ ನಂತರ ಹೊಸಪೇಟೆಗೆ ಸಾಗಿತು.
ನಗರದ ಅಶೋಕ ಸರ್ಕಲ್ ಹಾಗೂ ಬಸವೇಶ್ವರ ಸರ್ಕಲ್ ಬಳಿ ಬಹಿರಂಗ ಸಭೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪಕ್ಷದ ಮುಖಂಡರು ವಾಗ್ದಾಳಿ ನಡೆಸಿದರು. ಬಹಿರಂಗ ಸಭೆಯಲ್ಲಿ ಮಾತನಾಡಿದ (ಕೆಆರ್ಎಸ್) ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸ್ಥಾಪಿಸಲಾಗಿದೆ. ಜೆಸಿಬಿ (ಜೆಡಿಎಸ್, ಬಿಜೆಪಿ, ಕಾಂಗ್ರೆಸ್) ಪಕ್ಷಗಳು ರಾಜ್ಯದ ಸಾಮಾನ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಭ್ರಷ್ಟ, ದುಷ್ಟ, ಅನೈತಿಕ ರಾಜಕೀಯ ವ್ಯವಸ್ಥೆಯ ಪಕ್ಷಗಳಾಗಿವೆ. ಇದರ ವಿರುದ್ಧವಾಗಿ ರಾಜ್ಯಾದ್ಯಂತ ಜನರ ಚೈತನ್ಯವನ್ನು ಬಡಿದೆಬ್ಬಿಸಬೇಕಾಗಿದೆ ಎಂದರು.
ಓದಿ:ಸಂತೋಷ್ ಆತ್ಮಹತ್ಯೆ ಯತ್ನ ಕೇಸ್: ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟರ್ ಸೇರಿ 43 ಇನ್ಸ್ಪೆಕ್ಟರ್ಗಳ ವರ್ಗ
ಸುಮಾರು 2.40 ಸಾವಿರ ಕೋಟಿ ರೂಪಾಯಿ ಬಜೆಟ್ ಹೊಂದಿರುವ ನಮ್ಮ ರಾಜ್ಯದಲ್ಲಿ ಬಡತನ, ಅಸಮಾನತೆ, ಅನೈತಿಕ ವ್ಯವಸ್ಥೆ ಇರಬಾರದಿತ್ತು. ಆದರೆ ಇದು ತಾಂಡವವಾಡುತ್ತಿದೆ. ಹಣ ನೀಡಿ, ಹೆಂಡ ಕುಡಿಸಿ, ಕುಕ್ಕರ್ ಹಾಗೂ ಲಿಕ್ಕರ್ ನೀಡಿ ದುಷ್ಟರು ಹಾಗೂ ಭ್ರಷ್ಟರು ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.