ಕುಷ್ಟಗಿ (ಕೊಪ್ಪಳ): ಗೊಬ್ಬರದ ಬುಟ್ಟಿ ಎತ್ತಲು ಸಹಾಯ ಮಾಡುವಂತೆ ಕರೆದು ವಿವಾಹಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮಾಂಧನಿಗೆ ಬೇವಿನ ಹಾರ ಹಾಕಿ ಚಪ್ಪಲಿ ಸೇವೆ ಮಾಡಿರುವ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದ ಜಮೀನಿನಲ್ಲಿದ್ದ ಪ್ರಕಾಶ ಪೂಜಾರ ಎಂಬಾತ ಗೊಬ್ಬರದ ಬುಟ್ಟಿ ಎತ್ತುವಂತೆ ಮಹಿಳೆಯನ್ನು ಸಹಾಯಕ್ಕೆ ಕರೆದಿದ್ದಾನೆ. ಸಹಾಯಕ್ಕೆ ಬಂದ ಮಹಿಳೆಯನ್ನು ಬಿಗಿದಪ್ಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಮಹಿಳೆ ಚೀರಾಡಿಕೊಂಡಿದ್ದು, ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾಗ ಅತ್ಯಾಚಾರಿ ಹೆದರಿ ಅಲ್ಲಿಂದ ಪರಾರಿಯಾಗಿದ್ದ.
ಅತ್ಯಾಚಾರ ಆರೋಪಿಗೆ ಚಪ್ಪಲಿ ಏಟು ಕೊಟ್ಟ ಗ್ರಾಮಸ್ಥರು ಈ ಕುರಿತು ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಲು ಯತ್ನಿಸಿದ್ದ ವೇಳೆ ಮಹಿಳೆಯ ಕಡೆಯವರು ಆಗಿರುವ ಅವಮಾನ ಸಹಿಸಲಾಗದೆ ಆರೋಪಿಗೆ ಚಪ್ಪಲಿ, ಬೇವಿನ ಹಾರ ಹಾಕಿ, ಧರ್ಮದೇಟು ನೀಡಿದ್ದಾರೆ. ಇದೇ ವೇಳೆ ಮನನೊಂದ ಮಹಿಳೆ, ಪ್ರಕಾಶ ಪೂಜಾರಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ಚಪ್ಪಲಿಯಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಷ್ಟಗಿ ತಾಲೂಕಿನ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ದೂರು -ಪ್ರತಿದೂರು ದಾಖಲಾಗಿದ್ದು, 55 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.