ಕೊಪ್ಪಳ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ಜನವರಿ 22ರಂದು ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು. ದೇಶಾದ್ಯಂತ ಇರುವ ರಾಮಭಕ್ತರು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ, ಕಾಕತಾಳೀಯ ಎಂಬಂತೆ ಕೊಪ್ಪಳದ ಖ್ಯಾತ ಶಿಲ್ಪಿ ಹಾಗು ಹನುಮ ಭಕ್ತರಾದ ಪ್ರಕಾಶ್ ಶಿಲ್ಪಿ ಅವರು ಮೂರ್ತಿ ಕೆತ್ತನೆಗೆ ವೀಕ್ಷಣೆ ಮಾಡಿದ್ದ ಕಲ್ಲನ್ನೇ ರಾಮಲಲ್ಲಾನ ಮೂರ್ತಿ ಮಾಡಲು ಆಯ್ಕೆ ಮಾಡಲಾಗಿದೆ. ಹೀಗಾಗಿ ಅಯೋಧ್ಯೆಯ ರಾಮನಿಗೂ ಕೊಪ್ಪಳದ ಹನುಮ ಭಕ್ತನಿಗೂ ವಿಶೇಷ ನಂಟು ಕಂಡುಬಂದಿದೆ.
ಶಿಲ್ಪಕಾರರಾದ ಪ್ರಕಾಶ ಶಿಲ್ಪಿ ಮತ್ತು ಮಗ ಪುನೀತ್ ಶಿಲ್ಪಿ ಕಳೆದ ಹಲವು ವರ್ಷಗಳಿಂದ ಶಿಲ್ಪ ಕೆತ್ತನೆಯಲ್ಲಿ ತೊಡಗಿದ್ದಾರೆ. ಇಬ್ಬರೂ ಅಪ್ಪಟ ಹನುಮ ಭಕ್ತರೆಂಬುದು ವಿಶೇಷ. ಇವರು ತಯಾರಿಸುವ ಮೂರ್ತಿಗಳಿಗೆ ಮೈಸೂರಿನ ಕಣವಿಯಿಂದ ಶಿಲೆ ತರುತ್ತಾರೆ. ಈ ರೀತಿ ಶಿಲೆಯನ್ನು ತರಲು ಹೋದಾಗ ಇವರು ಆಯ್ಕೆ ಮಾಡಿ, ಬಳಿಕ ಕಾರಣಾಂತರಗಳಿಂದ ಬಿಟ್ಟು ಬಂದಿದ್ದ ಬಂಡೆ ಇದೀಗ ರಾಮಲಲ್ಲಾ ಮೂರ್ತಿಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಅವರು ಪ್ರಕಾಶ್ ಶಿಲ್ಪಿ ಆಯ್ಕೆ ಮಾಡಿ ಬಿಟ್ಟು ಹೋಗಿದ್ದ ಕಲ್ಲನ್ನೇ ರಾಮನ ಮೂರ್ತಿಗೆ ಆಯ್ಕೆ ಮಾಡಿದ್ದಾರೆ. ಅಲ್ಲದೆ ಇದೀಗ ರಾಮನನ್ನು ಕೆತ್ತಿದ ಶಿಲೆಯಿಂದಲೇ ಕೊಪ್ಪಳದಲ್ಲಿ ನಿರ್ಮಾಣ ಹಂತದಲ್ಲಿರುವ ಸಹಸ್ರಾಂಜನೇಯ ದೇವಸ್ಥಾನಕ್ಕೆ ಹನುಮ ಮೂರ್ತಿ ಕೆತ್ತನೆ ಮಾಡಲು ಸಂಕಲ್ಪ ತೊಟ್ಟಿದ್ದಾರೆ.