ಕೊಪ್ಪಳ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈಗೆ ಹೋಗಿ ಬಂದಿರುವುದನ್ನು ನೋಡಿದರೆ ಅವರಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಒಗ್ಗುತ್ತಿಲ್ಲ ಎನ್ನುವುದು ಅವರ ನಡುವಳಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಬಿಜೆಪಿ ತೊರೆಯುವ ಸಾಧ್ಯತೆ ಇದೆ ಎಂದು ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಮೇರ್ಶ್ ಜಾರಕಿಹೊಳಿಯೊಂದಿಗೆ ಕೆಲವರು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಮತ್ತೆ ಸೇರುವ ಸಾಧ್ಯತೆಯಿದೆ. ಒಂದು ವೇಳೆ ಅವರು ವಾಪಸ್ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಯಾವುದೇ ಪಕ್ಷದ ಶಾಸಕರಾಗಲಿ ಅವಧಿಯ ಮುನ್ನ ಪಕ್ಷಾಂತರ ಮಾಡಬಾರದು. ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರ ಮಾಡಿದರೆ ನಡೆಯುತ್ತದೆ. ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲು ಹೊರಟಿಲ್ಲ ಎಂದು ಅನಿಸುತ್ತದೆ. ಏಕೆಂದರೆ ಯಡಿಯೂರಪ್ಪ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಕಾರಣ. ಯಡಿಯೂರಪ್ಪ ಅವರನ್ನ ಬದಲಾಯಿಸುವುದು ಕಷ್ಟ. ಬಿಜೆಪಿಯಲ್ಲಿ ಯಡಿಯೂರಪ್ಪ ಇಲ್ಲವೆಂದರೆ ಬಿಜೆಪಿ ಇಲ್ಲ. ಸಂದರ್ಭ ಬಂದಾಗ ಶಾಸಕರು ಪಕ್ಷ ಬದಲಾಯಿಸುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಅತಿರೇಕಕ್ಕೆ ಹೋಗಿದೆ ಎಂದು ತಿಳಿಸಿದರು.
ಮುಂದಿನ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನದ ಬಗ್ಗೆ ಈಗ ಚರ್ಚಿಸಿದರೆ ಅದು ಬಿಜೆಪಿಗೆ ಅನುಕೂಲವಾಗಲಿದೆ. ನಾವೇ ಅವರಿಗೆ ಆಹಾರವಾಗುವುದು ಬೇಡ. ಕಾಂಗ್ರೆಸ್ ಪಕ್ಷದಲ್ಲಿ 7 ರಿಂದ 8 ಜನ ಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದವರಿದ್ದಾರೆ. ಚುನಾವಣೆ ಬಳಿಕ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಸಿಎಂ ಸ್ಥಾನಕ್ಕೆ ಕೆಲವರು ಕೆಲವರ ಹೆಸರು ಹೇಳುತ್ತಿದ್ದರೂ ತಪ್ಪೇನಿಲ್ಲ ಎಂದರು.