ಗಂಗಾವತಿ:ನಗರದ ಅಭಿವೃದ್ಧಿ, ಮೂಲ ಸೌಲಭ್ಯಗಳ ವಿಸ್ತರಣೆಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ಬಂದರೂ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವ ಘಟನೆ ನಡೆದಿದೆ.
ಮಳೆಯಿಂದಾಗಿ ರಸ್ತೆಯಲ್ಲಿ ನಿಂತ ನೀರು ನಗರದಲ್ಲಿ ಸುರಿದ ಸಾಧಾರಣ ಮಳೆಗೆ ಜನನಿಬಿಡಿ ಪ್ರದೇಶದಲ್ಲಿನ ಮುಖ್ಯ ರಸ್ತೆಗಳಲ್ಲಿ ಮೊಣಕಾಲುವರೆಗೆ ಮಳೆ ನೀರು ನಿಂತು ಜನ ಮತ್ತು ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾದ ಪ್ರಸಂಗ ನಡೆದಿದೆ.
ನಗರದ ಮಹಾವೀರ ವೃತ್ತದಿಂದ ಗಾಂಧಿ ವೃತ್ತದ ಮಾರ್ಗವಾಗಿ ಬಸವಣ್ಣ ವೃತ್ತದವೆಗೆ ನೀರು ನಿಂತ ಪರಿಣಾಮ ಸಾವಿರಾರು ಜನ ಮತ್ತು ವಾಹನ ಸವಾರರು ನಿಗದಿತ ಸ್ಥಳಕ್ಕೆ ತಲುಪಲು ಪರದಾಡಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಮಳೆ ಬಂದರೂ ಚರಂಡಿ ಮೂಲಕ ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದಂತೆ ಕಸಕಡ್ಡಿ ಸಂಗ್ರಹವಾಗಿದ್ದು, ಸಮಸ್ಯೆಗೆ ಕಾರಣವಾಗಿತ್ತು. ಮಳೆ ಬಂದ ಹಿನ್ನೆಲೆ ಚರಂಡಿ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಜನ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.