ಕೊಪ್ಪಳ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ. ಹೆಚ್. ಪೂಜಾರ ಆಗ್ರಹಿಸಿದರು.
ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಡಿ. ಹೆಚ್. ಪೂಜಾರ ಆಗ್ರಹ ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರವಾನಿಗೆ ಪಡೆದು ಗಣಿಗಾರಿಕೆ ನಡೆಸಿದರೆ ನಮ್ಮದೇನೂ ತಕರಾರು ಇಲ್ಲ. ಆದರೆ, ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದರು.
ಅಕ್ರಮ ಮರಳು ಗಣಿಗಾರಿಕೆಯಿಂದ ತಾಲೂಕಿನ ನರೇಗಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಅನೇಕ ಜೀವಗಳು ಸಹ ಬಲಿಯಾದ ಉದಾಹರಣೆಗಳು ಇವೆ. ಇಲ್ಲಿಂದ ಮರಳನ್ನು ಬೇರೆ ಬೇರೆ ಕಡೆಗೆ ಸಾಗಿಸುತ್ತಿರುವುದರಿಂದ ಸ್ಥಳೀಯ ಸಾಮಾನ್ಯ ಜನರಿಗೆ ಮನೆಕಟ್ಟಲು ಮರಳು ಸಿಗುತ್ತಿಲ್ಲ. ಗವಿಮಠದ ಶ್ರೀಗಳು ಮತ್ತು ತಾಲೂಕಿನ ಅನೇಕರು ತಿಂಗಳಾನುಗಟ್ಟಲೆ ಶ್ರಮಿಸಿ ಹಿರೇಹಳ್ಳವನ್ನು ಸ್ವಚ್ಛಗೊಳಿಸಿದರು. ಆದರೆ, ಅಕ್ರಮ ಮರಳುಗಣಿಗಾರಿಕೆಯಿಂದ ಅವರ ಶ್ರಮವೆಲ್ಲ ಮಣ್ಣುಪಾಲಾಗಿದೆ ಎಮದರು.
ತಾಲೂಕಿನ ನರೇಗಲ್ ಗ್ರಾಮದಿಂದ ಕೇವಲ 300 ಮೀಟರ್ ಅಂತರದಲ್ಲಿ ಹತ್ತಾರು ಅಡಿಗಳಲ್ಲಿ ಗುಂಡಿ ತೆಗೆದು ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಮುಂದೆ ಗ್ರಾಮದ ಜನರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಡಿ. ಹೆಚ್. ಪೂಜಾರ ಆಗ್ರಹಿಸಿದರು.