ಕೊಪ್ಪಳ/ಬೆಂಗಳೂರು: ಕೊಪ್ಪಳದ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಪಿಎಸ್ಐ ನೇಮಕಾತಿ ಮಾಡಿಸಿಕೊಡುವುದಾಗಿ ಹಣ ಪಡೆದಿದ್ದಾರೆ ಎನ್ನುವ ಕುರಿತಾಗಿ ಎದ್ದಿರುವ ಆರೋಪ-ಪ್ರತ್ಯಾರೋಗಳು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಪರಸಪ್ಪ, ನಿನ್ನೆ ಕಾಂಗ್ರೆಸ್ನವರು ನಾನು ಕೈ ಚೀಲವೊಂದನ್ನ ಹಿಡಿದುಕೊಂಡಿರುವ ಫೋಟೋ ತೋರಿಸಿ ಹಣ ಕೊಡಲು ಬಂದಿದ್ದ ಎಂದು ಆರೋಪಿಸಿದ್ದಾರೆ. ಆದರೆ, ಅದು ಹಣದ ಚೀಲವಲ್ಲ. ನಾನು ಅವರಿಗೆ ಹಣ್ಣು ಕೊಡಲು ಹೋಗಿದ್ದೆ ಎಂದು ಹೇಳಿದ್ದಾರೆ.
ಈ ಕುರಿತು ಈ ಹಿಂದೆ ಆಡಿಯೋ ಹೊರಬಿದ್ದ ಕೂಡಲೇ ಅದಕ್ಕೆ ಸ್ಪಷ್ಟನೆ ನೀಡಿದ ಶಾಸಕ ದಡೇಸಗೂರು ಆಡಿಯೋದಲ್ಲಿರುವ ಧ್ವನಿ ನನ್ನದೆ. ಆದರೆ, ನಾನು ಯಾವುದೇ ಹಣ ಪಡೆದಿಲ್ಲ ಎಂದಿದ್ದರು. ಅದಾದ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಪರಸಪ್ಪ ನಾನು ದಡೇಸಗೂರು ಸಂಬಂಧಿ. ಬೇರೆ ಒಂದು ವ್ಯವಹಾರದಲ್ಲಿ ಹಣ ನೀಡಿದ್ದೆ. ಆ ಕುರಿತು ಬೇರೆಯವರೊಂದಿಗೆ ನನಗೆ ಜಗಳವಾಗಿತ್ತು. ಅದನ್ನು ಬಗೇಹರಿಸಿಕೊಡಲು ಶಾಸಕ ಬಸವರಾಜ್ ದಡೇಸಗೂರು ಅವರೊಂದಿಗೆ ಮಾತನಾಡಿದ್ದೆ ಎಂದು ಹೇಳಿದ್ದಾರೆ.
ಇದಾದ ಬಳಿಕ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಶಿವರಾಜ್ ತಂಗಡಗಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಅವರು ಸರ್ಕಾರಕ್ಕೆ ಹಣ ನೀಡಿದ್ದೇನೆ. ಅದು ಮರಳಿ ಬರುವವರೆಗೂ ನೀನು ಕಾಯಬೇಕು ಎಂದು ಪರಸಪ್ಪನಿಗೆ ಹೇಳಿರುವ ಆಡಿಯೋ ಸಾಕ್ಷಿಯಾಗಿಟ್ಟುಕೊಂಡು ಅವರನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು.