ರಾಯಚೂರು/ಕೊಪ್ಪಳ:ರಾಯಚೂರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ವಿರುದ್ಧ ರಾಯಚೂರು ಹಾಗೂ ಕೊಪ್ಪಳದ ಗಂಗಾವತಿಯಲ್ಲಿ ವಿವಿಧ ಸಂಘಟನೆಗಳಿಂದ ಧರಣಿ ನಡೆಯಿತು.
ಪ್ರಕರಣವನ್ನು ವಿರೋಧಿಸಿ ಎಸ್ಎಫ್ಐ ಹಾಗೂ ಆಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗಳಿಂದ ಧರಣಿ ನಡೆಯಿತು. ಪ್ರಕರಣ ಸಂಬಂಧ ನಿಷ್ಪಕ್ಷಪಾತ ಹಾಗೂ ರಾಜಕೀಯ ಪ್ರಭಾವ ಮುಕ್ತ ತನಿಖೆ ನಡೆಸಲು ಪ್ರತಿಭಟನಾಕಾರರು ಒತ್ತಾಯಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಎಲ್ಲಾ ಕಡೆ ದುಡಿಯುತ್ತಿರುವ ಮಹಿಳೆಯರು ಹಾಗೂ ಶಿಕ್ಷಣ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚಿಸಿ ಕ್ರಿಯಾಶೀಲಗೊಳಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶಾದ್ಯಾಂತ ಮಹಿಳೆಯರ ಕೊಲೆ, ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದ್ದು, ನಿಯಂತ್ರಣ ಇಲ್ಲದಂತಾಗಿದೆ. ವಿದ್ಯಾರ್ಥಿನಿಯ ಕೊಲೆ ಪ್ರಕರಣ ನೋಡಿದರೆ, ಇದು ವ್ಯವಸ್ಥಿತ ಸಂಚು ಹಾಗೂ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ತನಿಖೆ ಚುರುಕುಗೊಳಿಸಬೇಕು. ಇಲ್ಲದೇ ಹೋದಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯ ನಾಶವಾಗುವ ಸಂಭವವಿದೆ ಎಂದು ದೂರಿದರು.