ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನವನಗರ ನಿವಾಸಿಗಳು ಪ್ರತಿಭಟಿಸಿದ್ರು.
ನವನಗರದಿಂದ ಭಾಗ್ಯನಗರ ಪಟ್ಟಣ ಪಂಚಾಯ್ತಿ ಕಚೇರಿವರೆಗೂ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಪಟ್ಟಣ ಪಂಚಾಯ್ತಿ ಮುಂದಿನ ಮುಖ್ಯರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನವನಗರ, ಭಾಗ್ಯನಗರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣದಿಂದ ಬಸ್ ಸೌಲಭ್ಯವೂ ಇಲ್ಲ. ಈ ಮೂಲಕ ಪಟ್ಟಣ ಪಂಚಾಯ್ತಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಬೇಡಿಕೆ ಈಡೇರಿಸುವಂತೆ ನವನಗರ ಜನರ ಪ್ರತಿಭಟನೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಈಗಾಗಲೇ ಶಾಸಕರು, ಸಂಸದರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ನಿರ್ಮಾಣ, ವಿದ್ಯುತ್ ದೀಪಗಳ ಸೌಲಭ್ಯ, ಸ್ವಚ್ಛತೆ, ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಸುಮಾರು 600 ಮತದಾರರಿದ್ದು ಇಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.