ಕೊಪ್ಪಳ: ಕೊಪ್ಪಳದ ಟಣಕನಕಲ್ ಗ್ರಾಮದಲ್ಲಿರುವ ಸರ್ಕಾರಿ ಐಟಿಐ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಎಐಡಿವೈಒ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಐಟಿಐ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಲು ಆಗ್ರಹ - ಸರ್ಕಾರಿ ಐಟಿಐ ಕೈಗಾರಿಕಾ ತರಬೇತಿ ಕೇಂದ್ರ
ಸರ್ಕಾರಿ ಐಟಿಐ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆಯಾಗಿ ಹಲವು ವರ್ಷ ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಎಐಡಿವೈಒ ಸಂಘಟನೆಯ ಕಾರ್ಯಕರ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ಸರ್ಕಲ್ನಿಂದ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆಯಾಗಿ ಹಲವು ವರ್ಷಗಳೇ ಕಳೆದರೂ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇದರಿಂದ ದಿನನಿತ್ಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಕಾಲೇಜು ಅವಧಿಯಲ್ಲಿ ಕುಡಿಯುವ ನೀರಿಗಾಗಿ ಪಕ್ಕದ ಟನಕನಕಲ್ ಗ್ರಾಮಕ್ಕೆ ಹೋಗಬೇಕು. ಸಮಸ್ಯೆ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ವಿಷಾದಿಸಿದರು.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರು ಹಾಗೂ ಇನ್ನಿತರೆ ಸೌಲಭ್ಯ ಕಲ್ಪಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಎಐಡಿವೈಒ ಸಂಘಟನೆಯ ಜಿಲ್ಲಾ ಸಂಘಟನಾಕಾರ ಶರಣಬಸವ ಪಾಟೀಲ್, ಜಿಲ್ಲಾ ಸಂಚಾಲಕ ರಮೇಶ ವಂಕಲಕುಂಟಿ, ಹನುಮೇಶ್ ಟಣಕನಕಲ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.