ಕೊಪ್ಪಳ: ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಕಳೆದ 13 ದಿನಗಳಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಹೆಚ್ಎಂ) ಗುತ್ತಿಗೆ, ಹೊರಗುತ್ತಿಗೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರ ಬಿಸಿ ಆರೋಗ್ಯ ಸೇವೆ ಹಾಗೂ ಆರೋಗ್ಯ ಇಲಾಖೆಗೆ ತಟ್ಟಿದೆ. ಹೀಗಾಗಿ, ಜಿಲ್ಲೆಯ ಗ್ರಾಮೀಣ ಪ್ರದೇಶ, ನಗರ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆ ವ್ಯತ್ಯಯವಾಗುತ್ತಿದೆ. ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಗುವಂತಾಗಿದೆ ರೋಗಿಗಳ ಸ್ಥಿತಿ.
ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರತಿಭಟನೆ ಸಿಬ್ಬಂದಿ ಇಲ್ಲದೆ ಸೇವಾ ವಲಯದಲ್ಲಿರುವ ಯಾವುದೇ ಇಲಾಖೆ ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ನೀಡಲು ಆಗುವುದಿಲ್ಲ. ಇದೇ ಸ್ಥಿತಿಯನ್ನು ಈಗ ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯೂ ಸಹ ಅನುಭವಿಸುತ್ತಿದೆ. ಎನ್‌ಹೆಚ್ಎಂ ಸಿಬ್ಬಂದಿ ಪ್ರತಿಭಟನೆಯಿಂದಾಗಿ ಮೇಲ್ನೋಟಕ್ಕೆ ಆರೋಗ್ಯ ಇಲಾಖೆಯ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿರುವುದು ಸ್ಪಷ್ಟ.
ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಜನರು ಪರದಾಡುವ ಸನ್ನಿವೇಶ ಕಂಡು ಬರುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 26 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 9 ಸಮುದಾಯ ಆರೋಗ್ಯ ಕೇಂದ್ರಗಳು, 3 ನಗರ ಆರೋಗ್ಯ ಕೇಂದ್ರಗಳು, ಮೂರು ಸಾರ್ವಜನಿಕ ಆಸ್ಪತ್ರೆಗಳು, ಒಂದು ಹೆರಿಗೆ ಆಸ್ಪತ್ರೆ ಇದೆ.
ಇಲ್ಲಿ ನಗರದಲ್ಲಿರುವ ಮೆಡಿಕಲ್ ಕಾಲೇಜ್ (ಕಿಮ್ಸ್) ಸೇರಿದಂತೆ ಜಿಲ್ಲೆಯ ಈ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಎನ್‌ಹೆಚ್ಎಂ ಯೋಜನೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರಿತ ಒಟ್ಟು 850 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸುವುದು ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಈಗ ಆ ಸಿಬ್ಬಂದಿ ಕಳೆದ 13 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸುತ್ತಿದ್ದಾರೆ.
ಪರಿಣಾಮವಾಗಿ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಜನರಿಗೆ ಸೇವೆ ಲಭ್ಯವಾಗುತ್ತಿಲ್ಲ. ಬಹುತೇಕ ಕಡೆ ಇದೇ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಗ್ರಾಮೀಣ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ. ಈ ಸಿಬ್ಬಂದಿ ಪ್ರತಿಭಟನೆಯಿಂದ ಒಂದಿಷ್ಟು ತೊಂದರೆಯಾಗಿದೆ. ಆದರೆ, ಇರುವ ಖಾಯಂ ಸಿಬ್ಬಂದಿ ಬಳಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಒದಗಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ.
ನಾವು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಿದೆ ನಿಜ. ಆದರೆ, ನಮಗೆ ಸೇವಾ ಭದ್ರತೆ ಇಲ್ಲ. ಹೀಗಾಗಿ, ಪ್ರತಿಭಟನೆ ಮಾಡುವುದು ಅನಿವಾರ್ಯ. ನಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ. ಈಗಾಗಲೇ ನಮ್ಮಲ್ಲಿ ಕೆಲವರನ್ನು ಕೆಲಸದಿಂದ ಸರ್ಕಾರ ತೆಗೆದುಹಾಕಿದೆ. ಆದರೂ ನಾವು ಹಿಂದೆ ಸರಿಯುವುದಿಲ್ಲ ಎಂಬುದು ಪ್ರತಿಭಟನಾ ನಿರತ ಸಿಬ್ಬಂದಿ ಮಾತು.