ಗಂಗಾವತಿ:ಆಶಾ ಕಾರ್ಯಕರ್ತೆಯರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಹಿರೇಜಂತಕಲ್ನ ಸೀಲ್ ಡೌನ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.
ಆರೋಗ್ಯ, ಕಂದಾಯ ಇಲಾಖೆಯೊಂದಿಗೆ ಸಮಾನವಾಗಿ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಸರ್ಕಾರದಿಂದ ಇಲ್ಲಿಯವರೆಗೆ ನಮಗೆ ಯಾವುದೇ ಸೂಕ್ತ ಸೌಲಭ್ಯ, ರಕ್ಷಣೆ, ವೇತನ ಹೆಚ್ಚಳದಂತಹ ಸೌಲಭ್ಯಗಳು ಸಿಕ್ಕಿಲ್ಲ.
ಕಳೆದ ನಾಲ್ಕು ತಿಂಗಳಿಂದ ನಾವು ಪ್ರತಿ ವಾರ್ಡ್ನ ಪ್ರತಿ ಮನೆಗೆ ತೆರಳಿ ಪ್ರತಿಯೊಬ್ಬರ ಮಾಹಿತಿ ಕಲೆಹಾಕುವ ಮೂಲಕ ಸರ್ಕಾರ ಕೈಗೊಳ್ಳುತ್ತಿರುವ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದೇವೆ. ಹಾಗಾಗಿ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.
ಆದಷ್ಟು ತ್ವರಿತವಾಗಿ ಸರ್ಕಾರ ನಮಗೆ ಮಾಸಿಕ 12 ಸಾವಿರ ವೇತನ ನೀಡಬೇಕು. ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಹಿನ್ನೆಲೆ ಅಗತ್ಯ ರಕ್ಷಣಾ ಪರಿಕರಗಳನ್ನು ನೀಡಬೇಕು. ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.