ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಖಂಡಿಸಿ ಪ್ರತಿಭಟನೆ ಗಂಗಾವತಿ:ನಗರದ ನ್ಯಾಯಾಲಯದ ಮುಂದಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವ ಘಟನೆ ಖಂಡಿಸಿ ನಗರದಲ್ಲಿ ದಿಢೀರ್ ಪ್ರತಿಭಟನೆ ನಡೆಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಜಮಾಯಿಸಿದ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ರಾಷ್ಟ್ರನಾಯಕ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ಘಟನೆಗೆ ನಗರಸಭೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಆಗಮಿಸುವವರೆಗೂ ಧರಣಿ ಹಿಂತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಮಾಹಿತಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ನಗರಠಾಣೆಯ ಪಿಐ ಪ್ರಕಾಶ್ ಮಾಳೆ, ತಹಸೀಲ್ದಾರ್ ನಾಗರಾಜ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಆಗಮಿಸಿ ಕ್ರಮದ ಭರವಸೆ ನೀಡಿದರು. ಆದರೆ ಧರಣಿ ಹಿಂತೆಗೆತಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ.
ಶಾಸಕ ರೆಡ್ಡಿ ಭರವಸೆ:ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಜನಾರ್ದನ ರೆಡ್ಡಿ ಆರೋಪಿಗಳ ಪತ್ತೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಕಾಲವಕಾಶ ನೀಡೋಣ. ರಾಷ್ಟ್ರ ನಾಯಕನಿಗೆ ಆದ ಅಪಮಾನ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಮಾಡಲಾದ ಅಪಮಾನವಲ್ಲ.
ಅದು ಕ್ಷೇತ್ರದ ಶಾಸಕ, ಜಿಲ್ಲೆಯ ಸಚಿವ, ಸಂಸದ, ರಾಜ್ಯದ ಮುಖ್ಯಮಂತ್ರಿ, ರಾಷ್ಟ್ರದ ಪ್ರಧಾನ ಮಂತ್ರಿಗೆ ಮಾಡಿದ ಅಪಮಾನ. ಹೀಗಾಗಿ ಆರೋಪಿಗಳ ಬಂಧನದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅಲ್ಲದೇ ಇಂದಿನಿಂದಲೇ ಅಂಬೇಡ್ಕರ್ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳುತ್ತೇನೆ. ಪುತ್ಥಳಿಗೆ ಪೂಜೆ ಸಲ್ಲಿಸಿ ಶುದ್ಧಗೊಳಿಸುವ, ಇದಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಖಂಡನೆ:ಮಾಜಿ ಶಾಸಕ ಪರಣ್ಣ ಮುನವಳ್ಳಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿದ್ದಾರೆ. ಅಲ್ಲದೇ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಸಂವಿಧಾನ ನೀಡುವ ಮೂಲಕ ಸಮಾನತೆ ಸಾರಿದ ಮಹಾಸಂತ ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಇಡೀ ದೇಶಕ್ಕೆ ಮಾಡಿದ ದ್ರೋಹದಂತೆ. ಹೀಗಾಗಿ ಕಿಡಿಗೇಡಿಗಳು ಯಾರೇ ಇರಲಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಇನ್ನು ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ:ವಿಜಯನಗರ: ಕಲುಷಿತ ನೀರು ಸೇವಿಸಿ ವೃದ್ಧೆ ಸಾವು