ಕೊಪ್ಪಳ: ಈ ಬಾರಿ ಕೊಪ್ಪಳ ಜಿಲ್ಲೆಯಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅಪಾರ ಹಾನಿಯೂ ಸಂಭವಿಸಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಳೆ ಹಾನಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಪರಿಹಾರ ಒದಗಿಸುವ ಭರವಸೆ ಕೊಟ್ಟರು.
ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿಯ ಹಿರೇಹಳ್ಳ ಜಲಾಶಯ ಒಂದೇ ದಿನದಲ್ಲಿ ಭರ್ತಿಯಾಗಿದ್ದು ಶುಕ್ರವಾರ ನಾಲ್ಕು ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ. ಹಿರೇಹಳ್ಳದುದ್ದಕ್ಕೂ ಅಲ್ಲಲ್ಲಿ ನಿರ್ಮಿಸಲಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಎರಡು ದಂಡೆಯಲ್ಲಿರುವ ಜಮೀನಿನ ಫಲವತ್ತಾದ ಮೇಲ್ಮಣ್ಣು ಕೊಚ್ಚಿಹೋಗಿದೆ. ಕೆಲವೆಡೆ ಎರಡೂ ದಂಡೆಯ ಭೂಮಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಿರೇಹಳ್ಳದ ಸಮೀಪ ನೀರಿನಿಂದಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಯುತ್ತಿದೆ.