ಕೊಪ್ಪಳ: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಕರ್ತವ್ಯದಲ್ಲಿದ್ದಾಗ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು.
ಕೊಪ್ಪಳದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ನಮನ - ಕೊಪ್ಪಳದಲ್ಲಿ ಪೊಲೀಸರಿಗೆ ಗೌರವ ನಮನ ಲೇಟೆಸ್ಟ್ ಸುದ್ದಿ
ಕೊಪ್ಪಳ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ನಗರದ ಎಸ್ಪಿ ಆಫೀಸ್ ಆವರಣದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂಜೀವ ಕುಲಕರ್ಣಿ, ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಗಣ್ಯರು ಸ್ಮಾರಕಕ್ಕೆ ಪುಷ್ಪಗುಚ್ಚ ಸಲ್ಲಿಸಿ ನಮನ ಅರ್ಪಿಸಿದರು. ಬಳಿಕ ಹುತಾತ್ಮ ಪೊಲೀಸರ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಪ್ರತಿ ವರ್ಷ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ. ಈ ವರ್ಷ ದೇಶದಲ್ಲಿ ಒಟ್ಟು 292 ಪೊಲೀಸರು ಹುತಾತ್ಮರಾಗಿದ್ದಾರೆ. ಈ ಪೈಕಿ 16 ಜನರು ಕರ್ನಾಟಕದವರು. ಕರ್ತವ್ಯದ ಸಂದರ್ಭದಲ್ಲಿ ಅವರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ಸ್ಮರಿಸಬೇಕು ಎಂದ್ರು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಅನನ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂಜೀವ ಕುಲಕರ್ಣಿ ಹೇಳಿದರು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಕಾನೂನು ಪಾಲನೆ ಮಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಕರ್ತವ್ಯದಲ್ಲಿದ್ದಾಗಲೇ ಅನೇಕ ಪೊಲೀಸರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅಂತಹ ಹುತಾತ್ಮ ಪೊಲೀಸರನ್ನು ಸ್ಮರಿಸಬೇಕು. ಈ ನಿಟ್ಟಿನಲ್ಲಿ ದೇಶದಾದ್ಯಂತ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ ಎಂದು ಪೊಲೀಸರ ಕರ್ತವ್ಯಪರತೆ ಸ್ಮರಿಸಿದ್ರು.