ಗಂಗಾವತಿ:ಪ್ರತಿ ನಿಮಿಷಕ್ಕೆ 500 ಲೀಟರ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಆಕ್ಸಿಜನ್ ಉತ್ಪಾದಕ ಘಟಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗುತ್ತಿದ್ದು, ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸುವರು.
ಆಕ್ಸಿಜನ್ ಘಟಕ ಸ್ಥಾಪನೆ ಸಂಬಂಧ ತಮಿಳುನಾಡಿನ ಪೆರಂಬದೂರಿನಿಂದ ಈಗಾಗಲೇ ಬಿಡಿಭಾಗಗಳು ರವಾನೆಯಾಗಿವೆ. ಮಂಗಳವಾರದಿಂದ ಎರಡು-ಮೂರು ದಿನಗಳ ಕಾಲ ಇಲ್ಲಿನ ವೈದ್ಯರು ಟ್ರಯಲ್ ರನ್(ಪ್ರಾಯೋಗಿಕ ಪರೀಕ್ಷೆ) ಮಾಡಲು ನಿರ್ಧರಿಸಿದ್ದಾರೆ.
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತೀವ್ರ ಆಮ್ಲಜನಕದ ಕೊರತೆ ಉಂಟಾಗಿ ಅಪಾರ ಸಾವು-ನೋವುಗಳಾಗಿದ್ದವು. ಇದನ್ನು ಗಮನಿಸಿದ ಸರ್ಕಾರ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರತ್ಯೇಕ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಮುಂದಾಗಿದೆ.