ಕೊಪ್ಪಳ: ತೋಟಗಾರಿಕೆ ಇಲಾಖೆ ವತಿಯಿಂದ ನಗರದಲ್ಲಿ ಸಸ್ಯ ಸಂತೆ ನಡೆಯುತ್ತಿದ್ದು, ಹೂವು, ಹಣ್ಣಿನ ಸಸ್ಯಗಳ ಮಾರಾಟ ಬಲು ಜೋರಾಗಿದೆ.
ಮುಂಗಾರು ಮಳೆ ಇನ್ನೂ ಸರಿಯಾಗಿ ಈ ವರ್ಷ ಆರಂಭವಾಗಿಲ್ಲ, ಆದರೂ ಜಿಲ್ಲೆಯಲ್ಲಿ ಅಲ್ಲಲ್ಲಿ ಸ್ವಲ್ಪ ಮಳೆಯಾಗಿ ನೆಲ ತೇವಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಸಸಿಗಳನ್ನು ನೆಡುವುದಕ್ಕೆ ಇದು ಸಕಾಲವಾಗಿರುವುದರಿಂದ ಬೇರೆ ಬೇರೆ ಸಸಿಗಳಿಗೆ ಫುಲ್ ಡಿಮ್ಯಾಂಡ್ ಇರುತ್ತದೆ. ಹೀಗಾಗಿಯೇ ತೋಟಗಾರಿಕೆ ಇಲಾಖೆಯು ನಗರದ ತೋಟಗಾರಿಕಾ ಕಚೇರಿ ಆವರಣದಲ್ಲಿ ಜೂನ್ 20 ರವರೆಗೆ ಸಸ್ಯ ಸಂತೆ ಆಯೋಜನೆ ಮಾಡಿದೆ.
ಈ ಸಂತೆಯಲ್ಲಿ ಮಾವು, ನಿಂಬೆ, ಪೇರಲ, ತೆಂಗು, ಸಪೋಟಾ, ನೇರಳೆ, ಕರಿಬೇವು ಸೇರಿದಂತೆ ವಿವಿಧ ಬಗೆಯ ಸಸ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರು ಮತ್ತು ರೈತರು ಬಂದು ತಮಗಿಷ್ಟವಾದ ಸಸಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಬೇರೆ ಬೇರೆ ಹಣ್ಣಿನ ಸಸಿಗಳಿಗೆ ಒಂದೊಂದು ರೀತಿಯ ಬೆಲೆ ಇದ್ದು, ಹತ್ತು ರೂಪಾಯಿಗೂ ಒಂದು ಸಸಿ ಇಲ್ಲಿ ಲಭ್ಯವಿವೆ. ಸಸ್ಯಸಂತೆಯಲ್ಲಿ ಬರೀ ಹಣ್ಣು ಹೂವಿನ ಸಸಿಗಳಷ್ಟೇ ಸಸಿಗಳ ಮಾರಾಟ ಮಾಡುತ್ತಿಲ್ಲ. ಜೊತೆಗೆ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆಗಳ ನಿರ್ವಹಣೆ ಸೇರಿದಂತೆ ರೈತರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತಿದೆ.
ಜಿಲ್ಲೆಯ ವಿವಿಧೆಡೆ ಇರುವ ಸುಮಾರು 10 ಕ್ಕೂ ಹೆಚ್ಚು ತೋಟಗಾರಿಕೆ ಫಾರ್ಮ್ಗಳಿಂದ ಈ ಸಸ್ಯಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಸಸ್ಯ ಸಂತೆ ಆರಂಭದ ದಿನವಾದ ನಿನ್ನೆ ಒಂದೇ ದಿನದಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ತೆಂಗಿನ ಸಸಿಗಳು ಮಾರಾಟವಾಗಿವೆ. ಜನರಿಂದ ಸಸ್ಯ ಸಂತೆಗೆ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ತೋಟಗಾರಿಕೆ ಇಲಾಖೆ ಹಣ್ಣು ಮೇಳ, ಜೇನು ಮೇಳ, ಮಾವು ಮೇಳ ಸೇರಿದಂತೆ ಅನೇಕ ಮೇಳಗಳನ್ನು ಆಯೋಜಿಸಿದಂತೆ ಈಗ ಸಸ್ಯಮೇಳವನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.