ಕುಷ್ಟಗಿ (ಕೊಪ್ಪಳ):ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಳೆದ 6 ವರ್ಷಗಳಿಂದ ಹಂದಿಗಳ ವಾಸಸ್ಥಾನವಾಗಿದೆ.
ದೋಟಿಹಾಳ ಗ್ರಾಮದಲ್ಲಿ 1989ರಲ್ಲಿ ಪ್ರಾರಂಭವಾದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಇದೀಗ ಶಿಥಿಲಾವಸ್ಥೆ ತಲುಪಿದೆ. ಅನಿವಾರ್ಯ ಕಾರಣಗಳಿಂದಾಗಿ 2014ರಿಂದ ಕಚೇರಿಗೆ ಬೀಗ ಹಾಕಲಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಯೂ ಇತ್ತ ಮುಖ ಮಾಡಿಲ್ಲ. ಹೀಗಾಗಿ ಈ ಕಚೇರಿ ಈಗ ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ 1989ರಲ್ಲಿ ಅಂದಿನ ಪ್ರಧಾನರು ಗ್ರಾಮಲೆಕ್ಕಿಗರ ಕಚೇರಿ ಕಟ್ಟಿಸಿ, ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದರು. 2014ರಿಂದ ಈ ಕಚೇರಿಗೆ ಬೀಗ ಹಾಕಲಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಆಸ್ತಿ ಕಣ್ಣೇದುರೆ ಹಾಳಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನೂ ಓದಿ:ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟಗೊಂಡು ಮನೆ ಗೋಡೆ ಕುಸಿತ, ಮಹಿಳೆಗೆ ಗಾಯ
ಹೀಗಾಗಿ, ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೇಂದ್ರ ಸ್ಥಾನಕ್ಕೆ ತೆರಳಬೇಕಾಗಿದೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಕೂಡಲೇ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಡವನ್ನು ನಿರ್ಮಿಸಿ ಕೊಡಬೇಕು ಅಥವಾ ಇದ್ದಂತಹ ಕಟ್ಟಡ ದುರಸ್ತಿಗೊಳಿಸಬೇಕು ಎಂದು ದೋಟಿಹಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.