ಕೊಪ್ಪಳ:ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಜನರ ಬದುಕಿನ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಸ್ವಯಂ ಉದ್ಯೋಗ ಮಾಡಿಕೊಂಡವರ ಬದುಕೂ ಸಹ ಇದಕ್ಕೆ ಹೊರತಾಗಿಲ್ಲ. ಫೋಟೋಗ್ರಫಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಫೋಟೋಗ್ರಾಫರ್ಗಳ ಬದುಕು ಈಗ ದುಸ್ತರವಾಗಿದೆ. ಇದರಿಂದಾಗಿ ಇಲ್ಲೋರ್ವ ಫೋಟೋಗ್ರಾಫರ್ ಕ್ಯಾಮರಾ ಬದಲಾಗಿ ಚಹಾದ ಪಾತ್ರೆ ಹಿಡಿದಿದ್ದಾರೆ.
ಹೌದು, ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವುದರಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿ ಮಾಡಲಾಗಿದೆ. ಮದುವೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಬಹುತೇಕ ಚಟುವಟಿಕೆಗಳು ಬಂದ್ ಆಗಿರುವುದರಿಂದ ಸ್ವಯಂ ಉದ್ಯೋಗ ಮಾಡುತ್ತಿದ್ದ ಅನೇಕರ ಜೀವನ ದುಸ್ತರವಾಗಿದೆ. ಅದರಲ್ಲಿ ಫೋಟೋಗ್ರಾಫರ್ಗಳ ಬದುಕು ಸಹ ಹೊರತಾಗಿಲ್ಲ. ಮದುವೆ, ಮುಂಜಿ ಸೇರಿದಂತೆ ಅನೇಕ ಸಮಾರಂಭಗಳಲ್ಲಿ ಪ್ರತಿ ವರ್ಷ ಲಕ್ಷ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದರು. ಈಗ ಕೊರೊನಾ ಸೋಂಕಿನಿಂದಾದ ಲಾಕ್‍ಡೌನ್‍ನಿಂದ ಎಲ್ಲ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ವೃತ್ತಿಪರ ಫೋಟೋಗ್ರಾಫರ್ಗಳಿಗೆ ಕೈಯಲ್ಲಿ ಕೆಲಸವಿಲ್ಲದಂತಾಗಿದೆ.
ಸುಮಾರು ವರ್ಷಗಳಿಂದ ಫೋಟೋಗ್ರಫಿ ಮೂಲಕ ಬದುಕು ನಡೆಸುತ್ತಿದ್ದ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಅಜಯ ಹಿರೇಮಠ ಎಂಬುವವರು ಈಗ ಆ ವೃತ್ತಿಯನ್ನು ಬಿಟ್ಟು ಚಹಾ ಮಾರಾಟ ಮಾಡುತ್ತಿದ್ದಾರೆ. ಅಜಯ ಹಿರೇಮಠ ಕಳೆದ 20 ವರ್ಷದಿಂದ ಫೋಟೋಗ್ರಫಿಯನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಸ್ಟುಡಿಯೋ ಹೊಂದಿರದ ಅಜಯ್ ಅವರು ಮದುವೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಫೋಟೋಗಳನ್ನು ತೆಗೆದು ದುಡಿಮೆ ಮಾಡಿಕೊಳ್ಳುತ್ತಿದ್ದರು. 20 ವರ್ಷದಲ್ಲಿ 6 ಕ್ಯಾಮರಾಗಳನ್ನು ಹೊಂದಿರುವ ಅಜಯ ಮದುವೆ ಸೀಜನ್‍ನಲ್ಲಿ ಸುಮಾರು 3 ಲಕ್ಷ ರೂಪಾಯಿ ಆದಾಯ ಸಂಪಾದಿಸುತ್ತಿದ್ದರು.