ಕೊಪ್ಪಳ:ತುಂಗಭದ್ರಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಸಿಲುಕಿದ್ದ ಜನರನ್ನು ಇಂದು ಸಹ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಿಸಲಾಯಿತು.
ರಕ್ಷಣಾ ಕಾರ್ಯಾಚರಣೆ ಕಂಪ್ಲೀಟ್: ನಡುಗುಡ್ಡೆಯಲ್ಲಿದ್ದವರೆಲ್ಲ ಸೇಫ್ - ವಿರುಪಾಪುರಗಡ್ಡೆ
ತುಂಗಭದ್ರಾ ನದಿಯ ಹರಿವು ಹೆಚ್ಚಾದ್ದರಿಂದ ಸಾಕಷ್ಟು ಸಂಕಷ್ಟಗಳು ಎದುರಾಗಿದ್ದವು. ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾದ ಪರಿಣಾಮ ವಿರುಪಾಪುರಗಡ್ಡೆಯಲ್ಲಿ ಪ್ರವಾಸಿಗರು ಸಿಲುಕಿಕೊಂಡಿದ್ದು, ನಡುಗುಡ್ಡೆಯಲ್ಲಿ ಸಿಲುಕಿದಂತಹ ಎಲ್ಲ ಜನರನ್ನು ಬೋಟ್ ಹಾಗೂ ಏರ್‌ಲಿಫ್ಟ್ ಮೂಲಕ ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಮೂರನೇ ದಿನವಾದ ಇಂದು, ಉಳಿದಿದ್ದ 195 ಜನರನ್ನು ಏರ್ ಲಿಫ್ಟ ಮೂಲಕ ರಕ್ಷಣೆ ಮಾಡಲಾಯಿತು. ನದಿ ಪ್ರವಾಹದಿಂದ ವಿರುಪಾಪುರಗಡ್ಡೆಯಲ್ಲಿ 24 ಜನ ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು 500 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯದ ಮೊದಲ ದಿನ ತೆಪ್ಪದ ಮೂಲಕ 64 ಜನರ ರಕ್ಷಣೆ ಮಾಡಲಾಗಿತ್ತು. ಇನ್ನು ಎರಡನೇ ದಿನ NDRF, ಅಗ್ನಿಶಾಮಕ ದಳ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿಕೊಂಡು ಬೋಟ್ ಹಾಗೂ ಏರ್‌ಲಿಫ್ಟ್ ಮೂಲಕ 310 ಜನರ ರಕ್ಷಣೆ ಮಾಡಿದ್ದರು.
ಇಂದು ಏರ್ ಲಿಫ್ಟ್ ಮೂಲಕ 195 ಜನರ ರಕ್ಷಣೆ ಮಾಡಲಾಗಿದ್ದು, ಒಟ್ಟು ಮೂರು ದಿನ ಕಾರ್ಯಾಚರಣೆಯಲ್ಲಿ 569 ಜನರ ರಕ್ಷಣೆ ಮಾಡಲಾಗಿದೆ. ನಡುಗಡ್ಡೆಯಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದ್ದು, ಈ ಮೂಲಕ ಅಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಕಂಪ್ಲೀಟ್ ಆದಂತಾಗಿದೆ.