ಕೊಪ್ಪಳ:ತಮ್ಮೂರಲ್ಲಿ ಕ್ವಾರಂಟೈನ್ ಕೇಂದ್ರ ಮಾಡಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ತಡರಾತ್ರಿಯವರೆಗೂ ರಸ್ತೆಯಲ್ಲಿ ಧರಣಿ ಕುಳಿತ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಾಗನಕಲ್ ಗ್ರಾಮದಲ್ಲಿರುವ ಪಾಲಿಟೆಕ್ನಿಕ್‌ನಲ್ಲಿ ಕ್ವಾರಂಟೈನ್ ಕೇಂದ್ರ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ. ಹೀಗಾಗಿ ಶಂಕಿತರನ್ನು ಇಲ್ಲಿ ಕ್ವಾರಂಟೈನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ತಡರಾತ್ರಿಯವರೆಗೂ ಧರಣಿ ನಡೆಸಿದರು.
ಘಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳಕ್ಕೆ ಬಂದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರೂ ಗ್ರಾಮಸ್ಥರು ಪಟ್ಟು ಬಿಡಲಿಲ್ಲ. ಇಲ್ಲಿ ಕ್ವಾರಂಟೈನ್ ಮಾಡುವುದರಿಂದ ನಮ್ಮೂರಿಗೆ ಸೋಂಕಿನ ಭೀತಿ ಎದುರಾಗುತ್ತದೆ. ಹೀಗಾಗಿ ಇಲ್ಲಿ ಕ್ವಾರಂಟೈನ್ ಕೇಂದ್ರ ಬೇಡ ಎಂದು ಗ್ರಾಮಸ್ಥರು ಬಿಗಿಪಟ್ಟು ಹಿಡಿದರು.
ಸ್ಥಳಕ್ಕೆ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ಬಂದು ಮನವೊಲಿಸುವ ಪ್ರಯತ್ನ ಮಾಡಿದರೂ ಗ್ರಾಮಸ್ಥರು ತಮ್ಮ ಬಿಗಿಪಟ್ಟು ಸಡಿಲಿಸಿಲ್ಲ. ಮಧ್ಯರಾತ್ರಿಯವರೆಗೂ ಗ್ರಾಮಸ್ಥರು ಧರಣಿ ಕುಳಿತಿದ್ದರು.
ನಮ್ಮ ಊರಲ್ಲಿ ಬೇಡ... ಧರಣಿ ಕುಳಿತ ಜನ