ಕುಷ್ಟಗಿ(ಕೊಪ್ಪಳ):ಕುಷ್ಟಗಿ ಪಟ್ಟಣದ ಹೊರವಲಯದ 1ನೇ ವಾರ್ಡ್ ವ್ಯಾಪ್ತಿಯ ಸಂತ ಶಿಶುನಾಳ ಷರೀಫ್ ನಗರದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಬಂದವರನ್ನು ಸ್ಥಳೀಯ ನಿವಾಸಿಗಳು ಪರೀಕ್ಷಿಸಿಕೊಳ್ಳದೆ ಕಾಯಿಸಿ ಸತಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮನೆಗೆ ಬೀಗ ಹಾಕಿಸಿ ಕೊರೊನಾ ಪರೀಕ್ಷೆ ಮಾಡಲು ಬಂದವರನ್ನು ಯಾಮಾರಿಸಿದ ಕುಷ್ಟಗಿ ಜನ - Kushtagi koppala latest news
ಕೊರೊನಾ ತಡೆಗೆ ಆರೋಗ್ಯ ಇಲಾಖೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಗೆ ಮುಂದಾದರೆ ಸಾರ್ವಜನಿಕರು ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಆರೋಗ್ಯ ಸಿಬ್ಬಂದಿ ಸಂತ ಶಿಶುನಾಳ ಷರೀಫ್ ನಗರದ ಮನೆ ಮನೆಗೆ ತೆರಳಿದ್ದರೂ ಕೂಡ ಜನರು ಪರೀಕ್ಷೆಗೊಳಪಡದಿರುವ ಘಟನೆ ನಡೆದಿದೆ.
ಆ್ಯಂಬ್ಯುಲೆನ್ಸ್ ವಾಹನವು ಸಂತ ಶಿಶುನಾಳ ಷರೀಫ್ ನಗರಕ್ಕೆ ಬರುತ್ತಿದ್ದಂತೆ ಅಲ್ಲಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಕೊರೊನಾ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ನಿವಾಸಿಗಳು ಮನೆಯಲ್ಲಿದ್ದರೂ ಕೂಡ ಮಕ್ಕಳ ಕೈಯಿಂದ ಮನೆಗೆ ಕೀಲಿ ಹಾಕಿಸಿಕೊಂಡು ಒಳಗೆ ಇದ್ದು, ಮನೆಯಲ್ಲಿ ಯಾರೂ ಇಲ್ಲ ಹೊರಗೆ ಹೋಗಿದ್ದಾರೆಂದು ಸುಳ್ಳು ಹೇಳಿಸಿದ್ದಾರೆ ಎನ್ನಲಾಗಿದೆ.
ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಅವರಿಗಾಗಿ ಕಾದರೂ ಕೂಡ, ಕೇವಲ 15 ಜನರು ಮಾತ್ರ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಕೊರೊನಾ ದೃಢವಾದರೆ ತಮ್ಮನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಎನ್ನುವ ಭೀತಿಗೆ ಈ ರೀತಿ ಮಾಡಿದ್ದಾರೆಂದು ತಿಳಿದುಬಂದಿದೆ.