ದಾವಣಗೆರೆ/ಬಾಗಲಕೋಟೆ/ಕೊಪ್ಪಳ: ಪೇಜಾವರ ಶ್ರೀ ನಿಧನ ಹಿನ್ನಲೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿ ಹಾಗೂ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಪೇಜಾವರ ಶ್ರೀಗೆ ವಿವಿಧ ಮಠಗಳ ಮಠಾಧೀಶರಿಂದ ಸಂತಾಪ - Pejawara Shree no more
ಪೇಜಾವರ ಶ್ರೀ ವಿಶ್ವೇಶತೀರ್ಥ ಪಾದಂಗಳವರು ವಿಧಿವಶರಾದ ಹಿನ್ನೆಲೆಯಲ್ಲಿ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿ ಹಾಗೂ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ದಾವಣಗೆರೆ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದು, ಅವರ ಜೊತೆಗಿನ ಒಡನಾಟದ ಬಗ್ಗೆ ವಿವರಿಸಿದ್ದಾರೆ. ಶ್ರೀಗಳು ವಾಮನನಂತೆ ಕೃಶಕಾಯರಾದರೂ ಧಾರ್ಮಿಕ ಕ್ಷೇತ್ರದಲ್ಲಿ ಆಕಾಶಕ್ಕೆ ಬೆಳೆದು ನಿಂತಿರುವ ತ್ರಿವಿಕ್ರಮನಂತೆ ಇದ್ದರು. ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಬಂದಿದ್ದ ಶ್ರೀಗಳು ತರಳಬಾಳು ಮತ್ತು ಪೇಜಾವರ ಮಠದ ಮಧ್ಯೆ ಇರುವ ಸುಮಧುರ ಬಾಂಧವ್ಯ ಸ್ಮರಿಸಿದ್ದಾರೆ.
ಬಾಗಲಕೋಟೆಯ ಗುಳೇದಗುಡ್ಡ ಪಟ್ಟಣದ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಂತಾಪ ಸೂಚಿಸಿದ್ದು, ಜಾತ್ಯಾತೀತ ಮನೋಭಾವನೆ ಹೊಂದಿರುವ ಶ್ರೀಗಳು, ಬಡವರು ಶ್ರೀಮಂತರು ಎನ್ನದೇ ದೀನ ದಲಿತರು ಎನ್ನದೇ ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಶ್ರೀಗಳು ಅಗಲಿರುವುದು ಇಡೀ ದೇಶಕ್ಕೆ ನಷ್ಟ ಉಂಟಾಗಿದೆ ಎಂದರು.
ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಶ್ರೀಗಳ ವ್ಯಕ್ತಿತ್ವ ಅನುಕರಣೀಯ. ಅವರದ್ದು ಪುಟ್ಟ ದೇಹ, ದಿಟ್ಟ ಮಾತು. ಮುಖದಲ್ಲಿ ಸದಾ ದೈವೀಕಳೆ, ಮನದಲ್ಲಿ ಸದಾ ದೇಶ ಪ್ರೇಮವಿತ್ತು ಎಂದು ಬಣ್ಣಿಸಿದರು. ಪೇಜಾವರ ಶ್ರೀಪಾದಂಗಳವರು ಜನರ ಕಣ್ಣಿನಿಂದ ಈಗ ದೂರವಾಗಿರಬಹುದು, ಮಣ್ಣಲ್ಲಿ ಮರೆಯಾಗಿರಬಹುದು. ಆದರೆ, ಲಕ್ಷ ಲಕ್ಷ ಭಕ್ತರ ಹೃದಯದಿಂದ ದೂರ ಆಗುವ ವ್ಯಕ್ತಿತ್ವ ಅವರದ್ದಲ್ಲ. ಅಂತಹ ಆಧ್ಯಾತ್ಮ ಚೇತನ ಅಗಲಿದ್ದು ಈ ನಾಡಿಗೆ ತುಂಬಲಾಗದ ಹಾನಿ. ಅವರ ಆದರ್ಶಗಳು, ಆಲೋಚನೆಗಳು ನಮಗೆ ಬೆಳಕಾಗಲಿ ಎಂದರು.