ಕೊಪ್ಪಳ: ತಮಗೆ ಕರ್ನಾಟಕದ ಬಗ್ಗೆ ಒಲವಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಾವು ಸಹ ಮುಂದಿನ ಸಿಎಂ ಆಕಾಂಕ್ಷಿ ಎಂದು ಹೇಳಿದರಾ ಎಂಬ ಚರ್ಚೆ ಈಗ ಶುರುವಾಗಿದೆ. ಇಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಒಂದು ಕ್ಷೇತ್ರಕ್ಕಿಂತ ರಾಜ್ಯದ ಮೇಲೆ ಒಲವಿದೆ ಎಂದು ಹೇಳಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದೆ.
ಸುಮಾರು 30 ರಿಂದ 40 ವರ್ಷಗಳ ಕಾಲ ಯಡಿಯೂರಪ್ಪ ಭಾರತೀಯ ಜನತಾ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಶಕ್ತಿ ಬಳಸಿಕೊಂಡು ಸ್ಪಷ್ಟವಾಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ನನಗೆ ಮತ್ತು ನನ್ನ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ. ನಾವು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ಅಭಿವೃದ್ಧಿ ದೃಷ್ಟಿಯಿಂದ ಜನ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಖಂಡಿತವಾಗಿಯೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಸ್ವಾಸವನ್ನು ಬಿಎಸ್ವೈ ಪುತ್ರ ವ್ಯಕ್ತಪಡಿಸಿದ್ರು.