ಗಂಗಾವತಿ: ಇಲ್ಲಿನ ಹಿರೇಜಂತಕಲ್ನ ಐತಿಹಾಸಿಕ ಪ್ರಸನ್ನ ಪಂಪಾಪತಿ ದೇಗುಲದ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ನಿಮಿತ್ತ ಸಂಜೆ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ದೇಗುಲದಿಂದ ಆರಂಭವಾದ ರಥೋತ್ಸವ ಪಾದಗಟ್ಟೆವರೆಗೂ ನಡೆಯಿತು. ಬಳಿಕ ಪಾದಗಟ್ಟೆಯಿಂದ ಪುನಃ ದೇಗುಲದ ಆವರಣದವರೆಗೂ ರಥವನ್ನು ಎಳೆಯಲಾಯಿತು. ಕೊರೊನಾ ಹಿನ್ನೆಲೆ ರಥೋತ್ಸವ ಕೈಬಿಟ್ಟು ಸಾಂಕೇತಿಕವಾಗಿ ಸರಳವಾಗಿ ಜಾತ್ರೆ ಆಚರಿಸುವ ಬಗ್ಗೆ ದೇಗುಲದ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತ್ತು. ಆದರೆ, ಸರ್ಕಾರ ಕೇವಲ ಮೂರು ದಿನಗಳ ಹಿಂದೆ ಎಲ್ಲ ಜಾತ್ರೆ, ರಥೋತ್ಸವ ಹಾಗೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಿದ ಹಿನ್ನೆಲೆ ಸ್ಥಳೀಯರು ಕೇವಲ ಎರಡು ದಿನಗಳಲ್ಲಿ ರಥೋತ್ಸವ ನಡೆಸುವ ಬಗ್ಗೆ ಚಿಂತನೆ ನಡೆಸಿ ಅದನ್ನು ಕಾರ್ಯಗತ ಮಾಡಿದರು.