ಗಂಗಾವತಿ (ಕೊಪ್ಪಳ) : ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೂ ಸುರಿದ ಅಕಾಲಿಕ ಮಳೆ ಹಾಗೂ ಬೀಸಿದ ಭಾರಿ ಗಾಳಿಗೆ ಗಂಗಾವತಿ ಮತ್ತು ಕಾರಟಗಿ ತಾಲೂಕಿನಲ್ಲಿ 3500ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಯಾಗಿದೆ.
ಕೊಯ್ಲಿನ ಹಂತಕ್ಕೆ ಬಂದಿದ್ದ ಸೋನಾಮಸೂರಿ ತಳಿಯ ಭತ್ತದ ಬೆಳೆ ಹೆಚ್ಚಿನ ಹಾನಿಯಾಗಿದೆ. ಕಾರಟಗಿ ತಾಲೂಕು ಒಂದರಲ್ಲಿಯೇ ಅತಿಹೆಚ್ಚು ಹಾನಿಯಾಗಿದ್ದು, ಸುಮಾರು ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿದೆ. ಗಂಗಾವತಿ ತಾಲೂಕಿನಲ್ಲಿ ಸುಮಾರು ಐದು ನೂರು ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ.
ಕಾರಟಗಿ-ಸಿದ್ದಾಪುರ ಹೋಬಳಿಯ ಬೂದಗುಂಪಾ, ಯರೋಡಣಾ, ಈಳಿಗೆನೂರು, ಮಲರ್ನಹಳ್ಳಿ, ಗಂಗಾವತಿ-ಮರಳಿ ಹೋಬಳಿಯ ಹೊಸಳ್ಳಿ, ಹಣವಾಳ, ಹೊಸಕೇರಿ, ಶ್ರೀರಾಮನಗರ, ಮರಳಿ, ನರಸಾಪುರ ಮೊದಲಾದ ಗ್ರಾಮಗಳಲ್ಲಿನ ಭತ್ತ ಹಾನಿಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಭತ್ತದ ಹಾನಿ ಮಾಹಿತಿ ಲಭಿಸುತ್ತಿದ್ದಂತೆಯೆ ಅಧಿಕಾರಿಗಳು ಸಮೀಕ್ಷೆಗೆ ಇಳಿದಿದ್ದಾರೆ.
ಸಂಕಷ್ಟಗಳ ಸರಮಾಲೆ : ಈ ಬಾರಿ ಎರಡು ಬೆಳೆಯ ನಿರೀಕ್ಷೆಯಲ್ಲಿದ್ದ ನೀರಾವರಿ ಪ್ರದೇಶದಲ್ಲಿನ ರೈತರಿಗೆ ಸಂಕಷ್ಟಗಳ ಸರಮಾಲೆ ಒಂದರ ಹಿಂದೊಂದರಂತೆ ಕಾಡುತ್ತಿವೆ. ಬರಗಾಲ, ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಗಳ ಮಧ್ಯೆ ಉತ್ತಮ ಬೆಳೆ ಬೆಳೆದಿದ್ದರು. ಆದರೆ ಈಗ ಎರಡನೇ ಬೆಳೆಯ ಆಸೆಯೂ ರೈತರಲ್ಲಿ ಕಮರುತ್ತಿದ್ದು, ಬೆಳೆದಿದ್ದ ಒಂದು ಬೆಳೆಯೂ ಮಳೆಗಾಳಿಗೆ ಹಾನಿಯಾಗಿರುವುದು ರೈತರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.