ಗಂಗಾವತಿ: ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಸಮೃದ್ಧವಾಗಿ ಬೆಳೆದು ನಿಂತಿರುವ ಭತ್ತದ ಪೈರು ಹಾನಿಗೊಳಗಾಗಿದೆ.
ತಾಲೂಕಿನ ಆನೆಗೊಂದಿ, ಮಲ್ಲಾಪುರ, ಮರಳಿ, ಮುಷ್ಟೂರು, ಕಲ್ಗುಡಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರೈತರು ಬೆಳೆದಿರುವ ಭತ್ತದ ಪೈರು ನಿರಂತರ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ನೆಲಕಚ್ಚುತ್ತಿದೆ.
ತುಂಗಭದ್ರಾ ನದಿಯನ್ನು ಆಶ್ರಯಿಸಿ ಬದುಕುತ್ತಿರುವ ಈ ಭಾಗದ ರೈತರು, ನೀರಿನ ಕೊರತೆ, ಕೀಟ ಬಾಧೆ, ನೈಸರ್ಗಿಕ ಸಮಸ್ಯೆ, ಹವಾಮಾನ ವೈಪರೀತ್ಯ, ಮಳೆಯ ಕಾಟದಂತಹ ಎಲ್ಲಾ ಸಮಸ್ಯೆಗಳನ್ನು ಮೀರಿ ಉತ್ತಮ ಬೆಳೆ ಬೆಳೆಯುತ್ತಿದ್ದರೂ ಸರಿಯಾದ ಮಾರುಕಟ್ಟೆ ಧಾರಣೆ ಸಿಗದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ.
ತುಂಗಭದ್ರಾ ಎಡದಂಡೆಯಾಶ್ರಿತ ಹಾಗೂ ಇತರೆ ನೀರಾವರಿ ಮೂಲಗಳಿಂದ ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಮಳೆಗೆ 150 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.