ಕೊಪ್ಪಳ: ಬಸವ ಜಯಂತಿ ಪ್ರಯುಕ್ತ ಕುಷ್ಟಗಿ ನಗರದ ರೈತ ಗೆಳೆಯರ ಬಳಗದ ವತಿಯಿಂದ ಜೋಡೆತ್ತಿನ ಗಡ್ಡಿ ಬಂಡಿಯ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಶಾಖಾಪೂರ ರಸ್ತೆಯಲ್ಲಿರುವ ದ್ಯಾಮಣ್ಣ ಕಟ್ಟಿಹೊಲ ಅವರ ಹೊಲದಲ್ಲಿ ಆಯೋಜಿಸಿದ್ದ ಗಡ್ಡಿ ಬಂಡಿ ಓಟದ ಸ್ಪರ್ಧೆಯಲ್ಲಿ ಬಾಗಲಕೋಟೆ, ಕೊಪ್ಪಳ, ರಾಯಚೂರು, ಗದಗ, ಧಾರವಾಡ ಜಿಲ್ಲೆಗಳಿಂದ ಒಟ್ಟು 27 ಜೋಡೆತ್ತುಗಳು ಭಾಗವಹಿಸಿದ್ದವು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದ ಜೋಡೆತ್ತಿನ ಗಡ್ಡಿ ಬಂಡಿಯ ಓಟದ ಸ್ಪರ್ಧೆ.. ನಿಗದಿತ ಸಮಯದ ಓಟದ ಸ್ಪರ್ಧೆಯಲ್ಲಿ ಬಾಗಲಕೋಟ ಜಿಲ್ಲೆಯ ಲೋಕಾಪೂರದ ದುರ್ಗಾದೇವಿ ಪ್ರಸನ್ನ ಎಂಬುವರ ಎತ್ತುಗಳು ಒಟ್ಟು 1,650 ಮೀಟರ್ ಓಡುವ ಮೂಲಕ ಪ್ರಥಮ ಬಹುಮಾನವಾಗಿ 51ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದವು. ದ್ವಿತೀಯ ಬಹುಮಾನವನ್ನು ಹುನಗುಂದ ತಾಲೂಕಿನ ತುಂಬಾ ಗ್ರಾಮದ ಮಂಜುನಾಥ ಅಂದಪ್ಪ ಎಂಬುವರ ಎತ್ತುಗಳು ಒಟ್ಟು 1475 ಮೀಟರ್ ಓಡುವ ಮೂಲಕ 31 ಸಾವಿರ ರೂ.ನಗದು ಬಹುಮಾನ ಹಾಗೂ ಟ್ರೋಫಿ ಪಡೆದವು.
ಕುಷ್ಟಗಿ ತಾಲೂಕಿನ ಬೆಂಚಮಟ್ಟಿ ಗ್ರಾಮದ ಬೀರಲಿಂಗೇಶ್ವರ ಎಂಬುವರ ಎತ್ತುಗಳು 1472 ಮೀಟರ್‌ಗಳವರೆಗೆ ಓಡಿ ತೃತೀಯ ಬಹುಮಾನವಾಗಿ 21 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ಪಡೆದವು. ಕುಷ್ಟಗಿಯ ಬಸವರಾಜ್ ಕಂಚಿ ಅವರ ಎತ್ತುಗಳು 1472 ಮೀಟರ್ ಓಡಿ,11 ಸಾವಿರ ರೂ.ನಗದು ಬಹುಮಾನದೊಂದಿಗೆ ಚತುರ್ಥ ಬಹುಮಾನ ಪಡೆದವು.
ಹಿರೇಮನ್ನಾಪೂರ ಗ್ರಾಮದ ಗುರು ಶಂಕರ ಲಿಂಗೇಶ್ವರ ಎತ್ತುಗಳು 1,411 ಮೀಟರ್ ಓಡಿ, 5,100 ರೂ. ನಗದು ಬಹುಮಾನ ಪಡೆದವು. ವಾರಿಕಲ್ ಗ್ರಾಮದ ದುರ್ಗಾದೇವಿ ಎತ್ತುಗಳು1408 ಮೀಟರ್‌ವರೆಗೆ ಓಡಿ ಹಿತ್ತಾಳೆ ಸರಪಳಿ ಬಹುಮಾನ ಪಡೆದವು. ಈ ಸ್ಪರ್ಧೆಯಲ್ಲಿ ವಿಜೇತ ಎತ್ತುಗಳಿಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬಹುಮಾನ ವಿತರಿಸಿದರು.
ಓದಿ :ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!