ಕುಷ್ಟಗಿ (ಕೊಪ್ಪಳ):ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಿರೇಮನ್ನಾಪೂರ ಚಾಕ್ರಿ ಹಳ್ಳದ ಪ್ರವಾಹಕ್ಕೆ ವೃದ್ಧನೋರ್ವ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಬುಡೆನ್ಸಾಬ್ ಅಗಸಿಮುಂದಿನ (65) ಹಳ್ಳದ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ವೃದ್ಧ.
ಇಳಿವಯಸ್ಸಿನಲ್ಲಿ ಮನೆಯಲ್ಲಿ ಖಾಲಿ ಕುಳಿತುಕೊಳ್ಳದ ಬುಡೆನ್ಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ಮಳೆ ಸುರಿದು ತುಂಬಿದ ಹಳ್ಳ ದಾಟಲು ಸಂದರ್ಭದಲ್ಲಿ ಎತ್ತಿನ ಸಮೇತ ಕೊಚ್ಚಿ ಹೋಗಿದ್ದರು. ಎತ್ತು ದಡ ಸೇರಿದ್ದು, ಬುಡೆನ್ಸಾಬ್ ಪ್ರವಾಹ ವಿರುದ್ಧ ಈಜಲಾಗದೇ ಮೃತಪಟ್ಟಿದ್ದಾರೆ.