ಕೊಪ್ಪಳ:ಜಿಲ್ಲೆಯಲ್ಲಿ ಮತ್ತೆ ಕೊರೊನಾ ಮಹಾಮಾರಿಯ ಆತಂಕ ಹೆಚ್ಚಾಗಿದೆ. ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಅಧಿಕಾರಿಗಳು ದೌಡಾಯಿಸಿ ಸೀಲ್ ಡೌನ್ ಮಾಡುತ್ತಿರೋದು ಇದಕ್ಕೆ ಪುಷ್ಠಿ ನೀಡಿದೆ.
ಪಾಸಿಟಿವ್ ಕೇಸ್ ಪತ್ತೆಯಾಗಿರುವ ಸ್ಥಳಗಳಿಗೆ ಈಗಾಗಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ದೌಡಾಯಿಸಿದ್ದಾರೆ. ಅಲ್ಲದೆ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ.
ಸೋಂಕಿತರ ಮನೆಗಳಿಗೆ ಅಧಿಕಾರಿಗಳು ಭೇಟಿ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಎರಡು ಕೇಸ್, ಕಾರಟಗಿ ತಾಲೂಕಿನಲ್ಲಿ 2 ಪ್ರಕರಣ ಹಾಗೂ ಯಲಬುರ್ಗಾ ಒಂದು ಪ್ರಕರಣ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಬಂದಿದ್ದ ಗಂಗಾವತಿಯ ಗಾಂಧಿನಗರದ 18 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢವಾಗಿದೆ. ಗಾಂಧಿನಗರವನ್ನು ಈಗಾಗಲೇ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೆ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗಿದೆ. ಮನೆಯಿಂದ ಹೊರ ಬರದಂತೆ ಅಧಿಕಾರಿಗಳು ಮೈಕ್ ಮೂಲಕ ಜನತೆಗೆ ಸೂಚಿಸಿದ್ದಾರೆ.
ಗಂಗಾವತಿ ತಾಲೂಕಿನ ಢಣಾಪುರ ಹಾಗೂ ಕಾರಟಗಿ ತಾಲೂಕಿನ ತಿಮ್ಮಾಪುರ ಹಾಗೂ ಕಾರಟಗಿ ಪಟ್ಟಣದ ಬಸವೇಶ್ವರ ನಗರದ ನಿವಾಸಿಯೊಬ್ಬರಿಗೆ ಹಾಗೂ ಯಲಬುರ್ಗಾ ತಾಲೂಕಿನಲ್ಲಿಯೂ ಒಬ್ಬರಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಆದರೆ ಅಧಿಕೃತ ಘೋಷಣೆ ಬಾಕಿಯಿದೆ.