ಕೊಪ್ಪಳ:ಬೆಳಗಾಗುವುದರೊಳಗಾಗಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದರೆ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ಆ ಶಕ್ತಿ ಅವರ ಪಕ್ಷದ ಹೈಕಮಾಂಡ್ಗೆ ಇದೆ ಎಂದು ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಬದಲಾವಣೆ ಕುರಿತಂತೆ ಅವರ ಪಕ್ಷದಲ್ಲಿಯೇ ಜೋರಾಗಿ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗ ಏನು ಮಾಡುತ್ತಾರೋ ಗೊತ್ತಿಲ್ಲ. ಬಾಲ ಹಿಡಿಯುವವರಿಗೆ ಅವರು ಅಧಿಕಾರ ಕೊಡ್ತಾರೆ. ಯಡಿಯೂರಪ್ಪ ಬದಲಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಬದಲಾವಣೆಯ ಚರ್ಚೆ ಹಿನ್ನೆಲೆಯಲ್ಲಿ ಬದಲಾವಣೆಯನ್ನು ಶಮನಗೊಳಿಸಲು ಬಿಜೆಪಿಯ ಶಾಸಕರೊಬ್ಬೊಬ್ಬರನ್ನು ಕರೆದು ಸಿಎಂ ಸಭೆ ಮಾಡುತ್ತಿದ್ದಾರೆ ಎಂದರು.
ಓದಿ:ಬೆಳಗಾವಿ ಗ್ರಾಮೀಣ ಭಾಗದಲ್ಲಿ ನಮ್ಮ ಅಭ್ಯರ್ಥಿಯೇ ಪ್ರಬಲ : ಸಚಿವ ರಮೇಶ್‌ಗೆ ಸತೀಶ್ ತಿರುಗೇಟು
ನಮ್ಮ ಕ್ಷೇತ್ರಗಳಲ್ಲಿ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಹೀಗಾಗಿ ಇಂತಹ ಸರ್ಕಾರ ಇರಬೇಕಾ, ಬೇಡವಾ ಎಂಬುದನ್ನು ಜನರು ತೀರ್ಮಾನ ಮಾಡಬೇಕು. ಯಡಿಯೂರಪ್ಪ ಅವರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ನೀಡಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ನಾವು ಏನು ಕೆಲಸ ಮಾಡಬೇಕು. ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಿದರೆ ನಾವೇನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಆ ಪಕ್ಷದ ಹಿರಿಯರಿದ್ದಾರೆ. ಅವರು ಮಾತನಾಡುವುದು ಸರಿಯಿದೆ. ಇಂದು, ನಿನ್ನೆ ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ಯತ್ನಾಳ್ ಪರವಾಗಿ ಬ್ಯಾಟ್ ಬೀಸಿದರು.