ಕುಷ್ಟಗಿ(ಕೊಪ್ಪಳ):ಕೋವಿಡ್ ಸೋಂಕು ದೃಢವಾದವರಿಗೆ ಹೋಮ್ ಐಸೋಲೇಶನ್ ಇಲ್ಲ, ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲಾಗುವುದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದ್ದಾರೆ.
ಕೋವಿಡ್ ವಿಚಾರ ಸಂಬಂಧ ಕುಷ್ಟಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತುರ್ತುಸಭೆಯಲ್ಲಿ ಮಾತನಾಡಿದ ಅವರು, ವಸತಿ ನಿಲಯಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಆದರೆ ಸೋಂಕಿತರು ಇಲ್ಲಿ ದಾಖಲಾಗಲು ಹಿಂಜರಿಯುತ್ತಿದ್ದಾರೆ. ಹೋಮ್ ಐಸೋಲೇಶನ್ ಇರುವ ಸೋಂಕಿತರ ಮನ ಓಲೈಸಿ ಕೋವಿಡ್ ಸೆಂಟರ್ಗೆ ಕರೆತರಲಾಗುತ್ತಿದೆ. ಈ ಕಾರ್ಯದಲ್ಲಿ ಇತರೆ ಇಲಾಖೆಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದರು.
ಇನ್ಮುಂದೆ ಕೋವಿಡ್ ಪಾಸಿಟಿವ್ ಬಂದವರನ್ನು ನೇರವಾಗಿ ಕೋವಿಡ್ ಸೆಂಟರ್ಗೆ ದಾಖಲಿಸಬೇಕು. ಅವರು ಗುಣಮುಖರಾಗುವ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಮೇರೆಗೆ ಡಿಸ್ಚಾರ್ಜ್ ಮಾಡಬೇಕೆಂದು ಸಲಹೆ ನೀಡಿದರು. ತಾಲೂಕಿನ ಕೆಲ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರಿಗೆ ಕೇವಲ ಮೂರು ಇಡ್ಲಿ ನೀಡುತ್ತಿರುವುದು ತಿಳಿದು ಬಂದಿದೆ. ಊಟದ ವಿಷಯದಲ್ಲಿ ಮಿತಿ ಬೇಡ, ಹೊಟ್ಟೆ ತುಂಬಾ ಊಟದ ವ್ಯವಸ್ಥೆ ಆಗಬೇಕು. ಈ ಹಿನ್ನೆಲೆಯಲ್ಲಿ ವಸತಿ ನಿಲಯ ಅಡುಗೆಯವವರನ್ನು ಕರೆಸಿ ಅಲ್ಲಿಯೇ ಅಹಾರ ತಯಾರಿಸಬೇಕು. ಅದಕ್ಕೆ ಬೇಕಾಗುವ ದಿನಸಿಯನ್ನು ಗ್ರಾಮ ಪಂಚಾಯತ್ನವರು ವಹಿಸಿಕೊಳ್ಳಲು ಸೂಚಿಸಿದರು. ಸೋಂಕಿತರಿಗೆ ಹೊಟ್ಟೆ ತುಂಬ ಊಟ ನೀಡಿದರೆ ಆರೋಗ್ಯ ವರ್ಧಿಸುವ ಸಾಧ್ಯತೆ ಇದೆ ಎಂದ್ರು. ಈ ದಿನ ಹಲವು ಕೋವಿಡ್ ಸೆಂಟರ್ಗೆ ಭೇಟಿ ನೀಡಿ ಬಂದಿರುವೆ, ಹನುಮಸಾಗರ, ಮಾಲಗಿತ್ತಿಯಲ್ಲಿ ಒಳ್ಳೆಯ ಊಟ ನೀಡಿದ್ದಾರೆ. ಊಟದ ವ್ಯವಸ್ಥೆಯಲ್ಲಿ ಹನುಮಸಾಗರ ಮಾದರಿಯಾಗಿದೆ ಎಂದು ಹೇಳಿದರು.
ಲಸಿಕೆಯನ್ನು ಹಾಕಿಸಲು ಪ್ರೇರೇಪಿಸಬೇಕಿದೆ. ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೆ ಶೇ. 80 ರಷ್ಟು ಕೊರೊನಾ ರೋಗದಿಂದ ಬಚಾವ್ ಆಗಬಹುದಾಗಿದೆ ಎಂದ ಅವರು, ಲಸಿಕೆ ಯಾವುದೇ ಕಾರಣಕ್ಕೂ ಸ್ಟಾಕ್ ಬೀಳಬಾರದು. ಲಸಿಕೆ ಖಾಲಿಯಾದಷ್ಟು ಇನ್ನಷ್ಟು ಲಸಿಕೆ ತರಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಎಂ. ಸಿದ್ದೇಶ, ತಾ.ಪಂ. ಇಓ ಕೆ. ತಿಮ್ಮಪ್ಪ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ, ಆರೋಗ್ಯ ಇಲಾಖೆಯ ಸೋಮಶೇಖರ ಮೇಟಿ, ಸಿಡಿಪಿಓ ಅಮರೇಶ ಮತ್ತಿತರರು ಇದ್ದರು.