ಕೊಪ್ಪಳ: ಈಗ ಒಂಭತ್ತು ಮತ್ತು 10ನೇ ತರಗತಿಗಳ ಶಾಲೆಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಸ್ಗಳಿಲ್ಲದೆ ಶಾಲೆ ತಲುಪಲು ಹರಸಾಹಸ ಪಡುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ವಿದ್ಯಾರ್ಥಿಗಳು ಜೆಸಿಬಿಯ ಬಕೆಟ್ನಲ್ಲಿ ನಿಂತುಕೊಂಡು ಶಾಲೆಗೆ ಹೋಗುವ ಮೂಲಕ ಅಲ್ಲಿನ ಅನಾನುಕೂಲತೆಯನ್ನು ಬಿಂಬಿಸಿದ್ದಾರೆ. ಮುದ್ದಾಬಳ್ಳಿ ಗ್ರಾಮದ ಸುಮಾರು 90 ವಿದ್ಯಾರ್ಥಿಗಳು ಹ್ಯಾಟಿ ಗ್ರಾಮದಲ್ಲಿನ ಹೈಸ್ಕೂಲ್ಗೆ ನಿತ್ಯವೂ ನಡೆದುಕೊಂಡು ಹೋಗುತ್ತಿದ್ದಾರೆ.
90 ವಿದ್ಯಾರ್ಥಿಗಳಿಂದ ನಟರಾಜ ಸರ್ವೀಸ್..!
ಮುದ್ದಾಬಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇರುವುದರಿಂದ ಹೈಸ್ಕೂಲ್ಗೆ ಹ್ಯಾಟಿ ಗ್ರಾಮಕ್ಕೆ ಹೋಗುತ್ತಾರೆ. ಈಗ ಸದ್ಯ ಮುದ್ದಾಬಳ್ಳಿ ಗ್ರಾಮದಿಂದ ಹ್ಯಾಟಿ ಗ್ರಾಮದ ಹೈಸ್ಕೂಲ್ಗೆ ಎಸ್ಎಸ್ಎಲ್ಸಿಯ 60 ಹಾಗೂ 9ನೇ ತರಗತಿಯ 30 ವಿದ್ಯಾರ್ಥಿಗಳು ಸೇರಿ ಒಟ್ಟು 90 ವಿದ್ಯಾರ್ಥಿಗಳು ಹೋಗುತ್ತಾರೆ.
ಬಸ್ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳ ಪರದಾಟ ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ಡೌನ್ನಿಂದ ಈವರೆಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಆರಂಭವಾಗದ ಹಿನ್ನೆಲೆಯಲ್ಲಿ ಬಸ್ಗಳು ಬರುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ನಿತ್ಯವೂ ನಡೆದುಕೊಂಡೋ ಅಥವಾ ಸಿಕ್ಕ ಸಿಕ್ಕ ವಾಹನಗಳನ್ನ ಬಳಸಿ ಶಾಲೆ ತಲುಪುತ್ತಾರೆ.
ಭಯದಲ್ಲಿ ಹೆಣ್ಣುಮಕ್ಕಳು..
ಮುದ್ದಾಬಳ್ಳಿ ಗ್ರಾಮದಿಂದ ಬೆಳಗ್ಗೆ ಸುಮಾರು 8.30ಕ್ಕೆ ವಿದ್ಯಾರ್ಥಿಗಳು ಹೊರಡುತ್ತಾರೆ. ಶಾಲೆ ಬಿಟ್ಟ ಬಳಿಕ ಮತ್ತೆ ವಾಪಸ್ ನಡೆದುಕೊಂಡು ಊರಿಗೆ ಬರಬೇಕು. ಇದು ನಿತ್ಯದ ಅನಿವಾರ್ಯತೆಯಾಗಿದೆ. ಗಂಡು ಮಕ್ಕಳು ಹೇಗೋ ಶಾಲೆ ತಲುಪುತ್ತಾರೆ. ಆದರೆ ಹೆಣ್ಣು ಮಕ್ಕಳು ಭಯದಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಮಹಿಳೆಯರ ಮೇಲೆ ಅತ್ಯಾಚಾರದಂತಹ ಘಟನೆಗಳು ನಡೆಯುತ್ತಿವೆ. ಇದರಿಂದ ನಮಗೆ ತುಂಬಾ ಭಯವಾಗುತ್ತದೆ. ನಾವು ನಿತ್ಯವೂ ನಮ್ಮೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರವಿರುವ ಶಾಲೆಗೆ ನಡೆದುಕೊಂಡು ಹೋಗಬೇಕಿದೆ. ಹೀಗೆ ನಡೆದುಕೊಂಡು ಹೋಗುವಾಗ ತುಂಬಾ ಭಯವಾಗುತ್ತದೆ. ಹೀಗಾಗಿ ಬಸ್ ವ್ಯವಸ್ಥೆಯಾಗಬೇಕು. ಬಸ್ನಲ್ಲಾದರೆ ಎಲ್ಲರೂ ಸೇರಿಕೊಂಡು ಶಾಲೆಗೆ ಹೋಗುತ್ತೇವೆ. ಆದ್ದರಿಂದ ಶಾಲೆಗೆ ಹೋಗಲು ಅನುಕೂಲವಾಗುವಂತೆ ಸರ್ಕಾರಿ ಬಸ್ ಗಳನ್ನು ಬಿಡಬೇಕು ಎಂದು ಮುದ್ದಾಬಳ್ಳಿ ಗ್ರಾಮದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಮುದ್ದಾಬಳ್ಳಿ ಗ್ರಾಮದ ವಿದ್ಯಾರ್ಥಿಗಳ ಈ ಸಮಸ್ಯೆ ಕೇವಲ ಒಂದು ಉದಾಹರಣೆ ಅಷ್ಟೇ. ಆದರೆ ಜಿಲ್ಲೆಯ ಇನ್ನೂ ಅನೇಕ ಗ್ರಾಮಗಳ ವಿದ್ಯಾರ್ಥಿಗಳ ಪಾಡು ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯಾದರೂ ಬಸ್ಗಳ ಸಂಚಾರ ಆರಂಭಿಸಬೇಕಿದೆ.
ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಪದವೀಧರರು, ಮಹಿಳಾಮಣಿಗಳು ಕಣಕ್ಕೆ