ಕೊಪ್ಪಳ:ಜಿಲ್ಲೆಗೆ ಮಂಜೂರಾಗಿರುವ ನೂತನ ವಿಶ್ವವಿದ್ಯಾಲಯವನ್ನು ಬೇರೆ ಕಡೆ ಹಸ್ತಾಂತರಿಸಲು ಬಿಡುವುದಿಲ್ಲ, ಜಿಲ್ಲಾ ಕೇಂದ್ರದಲ್ಲಿಯೇ ನೂತನ ವಿವಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ವಿವಿಯನ್ನು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಬೇಕು ಎಂದು ರಾಜ್ಯಪತ್ರದಲ್ಲಿಯೇ ಇದೆ. ಬೇರೆ ಕಡೆ ಹಸ್ತಾಂತರ ಮಾಡುವ ಗುಮಾನಿ ಇದ್ದು, ಈ ಕುರಿತು ಸಂಸದ ಸಂಗಣ್ಣ, ಎಂಎಲ್ಸಿ ಹೇಮಲತಾರೊಂದಿಗೆ ಚರ್ಚಿಸಿದ್ದೇನೆ. ವಿವಿ ಸ್ಥಾಪನೆಗೆ ಜಿಲ್ಲಾ ಕೇಂದ್ರದಲ್ಲಿಯೇ ಮೂರು ನಾಲ್ಕು ಕಡೆಗಳಲ್ಲಿ ಜಾಗ ಹುಡುಕಾಟ ನಡೆಸಿದ್ದೇವೆ ಎಂದರು.
ಜಿಲ್ಲೆ ಮಾತ್ರವಲ್ಲದೇ ರಾಜ್ಯಾದ್ಯಂತ ವಿಪರೀತ ಮಳೆ ಸುರಿದಿದ್ದು, ಬಹಳಷ್ಟು ಹಾನಿ ಉಂಟಾಗಿದ್ದು, ರಸ್ತೆಗಳು ಹಾನಿಯಾಗಿವೆ. ಪ್ರತಿ ಕಿಲೋಮೀಟರ್ ರಸ್ತೆ ದುರಸ್ತಿಗೆ 60 ಸಾವಿರ ರೂಪಾಯಿ ನೀಡುತ್ತೇವೆ. ಬಹಳಷ್ಟು ಹಾನಿಯಾಗಿದ್ದರೇ 1 ಲಕ್ಷ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಇಷ್ಟು ಹಣ ಸಾಕಾಗುವುದಿಲ್ಲ ಎಂದು ಹೇಳಿದ್ದೇವೆ. ಈ ಕುರಿತು ಅನುದಾನ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.