ಕೊಪ್ಪಳ:ಸಾಮಾನ್ಯ ಜನರಿಗೆ ಮರಳು ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಸಿಗುವ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ್ ಪಾಟೀಲ್ ನಗರದ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ರಾಜಶೇಖರ್ ಪಾಟೀಲ್, ಮರಳಿನ ಸಮಸ್ಯೆ ಇಂದು ನಿನ್ನೆಯದಲ್ಲ. ಸುಮಾರು ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ. ಸಾಮಾನ್ಯ ಜನರಿಗೆ ಮರಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಮರಳು ನೀತಿ ಜಾರಿಗೆ ತರಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ಕಡಿಮೆ ದರದಲ್ಲಿ ಹಾಗೂ ಸಾಮಾನ್ಯ ಜನರಿಗೆ ಸುಲಭವಾಗಿ ಮರಳು ಲಭ್ಯವಾಗುವ ನಿಟ್ಟಿನಲ್ಲಿ ಹೊಸ ಮರಳು ನೀತಿ ರೂಪಿಸಲಾಗುತ್ತಿದ್ದು, ಸ್ಟಾಕ್ ಯಾರ್ಡ್ಗಳ ಮೂಲಕ ಮರಳು ವಿತರಣೆ ಮಾಡಲು ಯೋಜಿಸಲಾಗಿದೆ. ಹಟ್ಟಿ ಮೈನ್ಸ್ ಲಿಮಿಟೆಡ್ ಮೂಲಕ ಸ್ಟಾಕ್ಯಾರ್ಡ್ ಮಾಡಲು ಯೋಚಿಸಲಾಗಿದೆ ಎಂದರು.
ಇನ್ನು, ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆಗೆ ಪೊಲೀಸರು ಹಾಗೂ ಅಧಿಕಾರಿಗಳು ಕಾರಣವಾ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಸಚಿವ ಮುಂದಿಟ್ಟಾಗ, ಒಂದು ವೇಳೆ ಅಧಿಕಾರಿಗಳು ಅಕ್ರಮ ಮರಳು ಸಾಗಣೆಗೆ ಸಾಥ್ ನೀಡಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಚ್ಚರಿಕೆ ರವಾನಿಸಿದರು.
ಮರಳು ತುಂಬಿಕೊಂಡು ಹೋಗುವ ಕಬಂಡಿ, ಟ್ರಾಕ್ಟರ್ ಗಳ ಮೇಲೆ ಮಾತ್ರ ಎಫ್ಐಆರ್ ಹಾಕಲಾಗುತ್ತದೆ. ಆದರೆ, ಟಿಪ್ಪರ್ಗಳ ಮೇಲೆ ಎಫ್ಐಆರ್ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಅಲ್ಲದೆ ಸಂಬಂಧಿಸಿದ ಇಲಾಖೆಯ ಸಚಿವರ ಮೂಲಕ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಸಚಿವರು ಹೇಳಿದರು.
ಇನ್ನು, ಸರ್ಕಾರ ಅಸ್ತಿತ್ವ ಬಂದಾಗಿನಿಂದಲೂ ಸರ್ಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರೈಸಿದೆ. ಇನ್ನೂ ನಾಲ್ಕು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಸಂದರ್ಭದಲ್ಲಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.