ಕೊಪ್ಪಳ: ನಗರದ ಸಾರ್ವಜನಿಕರ ಸಮಸ್ಯೆಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳಿಗೆ ಪೂರ್ಣ ವಿರಾಮ ಹಾಕಲು ನಗರಸಭೆ ಮುಂದಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿದ್ದ ವಾಕಿಟಾಕಿ ವ್ಯವಸ್ಥೆ ಈಗ ಕೆಲ ವಲಯಕ್ಕೂ ಬಂದಿದ್ದು, ತ್ವರಿತ ಕೆಲಸಕ್ಕೆ ಅನುಕೂಲವಾಗುತ್ತಿದೆ. ಈ ವಾಕಿಟಾಕಿಗಳೀಗ ಕೊಪ್ಪಳ ನಗರಸಭೆ ಸಿಬ್ಬಂದಿ ಕೈ ಸೇರಿದೆ. ಈ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೊಪ್ಪಳ ನಗರಸಭೆ ಮುಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಕೊಪ್ಪಳ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರ ಜತೆಗೆ ಸಮಸ್ಯೆಗಳು ಸಹ ಬೆಳೆಯುತ್ತಿವೆ. ನಗರದ ಸಾರ್ವಜನಿಕರ ಸಮಸ್ಯೆಗೆ ನಗರಸಭೆ ಅಧಿಕಾರಿಗಳು - ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಸಮಸ್ಯೆ ಸರಿಪಡಿಸಲು 15 ನೇ ಹಣಕಾಸು ಅನುದಾನದಲ್ಲಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ವಾಕಿಟಾಕಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಗರದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುವಂತೆ ವಾಕಿಟಾಕಿ ವ್ಯವಸ್ಥೆಯನ್ನು ನಗರಸಭೆ ಇತ್ತೀಚಿಗೆ ಅಳವಡಿಸಿಕೊಂಡಿದೆ.
ಕುಡಿಯುವ ನೀರು, ನೈರ್ಮಲ್ಯ, ತಾಜ್ಯ ವಿಲೇವಾರಿ ಸೇರಿದಂತೆ ನಗರಸಭೆ ವ್ಯಾಪ್ತಿಯ ವಾರ್ಡ್ಗಳ ವಿವಿಧ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ನಗರಸಭೆ ಪೌರಾಯುಕ್ತರು ಸೇರಿದಂತೆ ಮೇಲುಸ್ತುವಾರಿಯ 40 ಸಿಬ್ಬಂದಿ ಕೈಗೆ ಈಗ ವಾಕಿ-ಟಾಕಿ ನೀಡಲಾಗಿದೆ.
ನಗರಸಭೆ ತನ್ನದೇ ಆದ ಪ್ರತ್ಯೇಕ ವಾಕಿ- ಟಾಕಿ ಕಂಟ್ರೋಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸಾರ್ವಜನಿಕರ ಯಾವುದೇ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರಾದರೂ ಅಂದುಕೊಂಡಷ್ಟು ತ್ವರಿತವಾಗಿ ಸ್ಪಂದಿಸಲು ಆಗುತ್ತಿಲ್ಲ. ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡುವುದು, ಅವರು ಅಲ್ಲಿಗೆ ಹೋಗಿ ಸ್ಪಂದಿಸಲು ವಿಳಂಬವಾಗುತ್ತಿತ್ತು. ಹೀಗಾಗಿ ಈಗ ವಾಕಿ- ಟಾಕಿ ವ್ಯವಸ್ಥೆಯಿಂದ ಸಮಸ್ಯೆಗೆ ಸ್ಪಂದಿಸಲು ಅತ್ಯಂತ ಅನುಕೂಲವಾಗುತ್ತಿದೆ.