ಕೊಪ್ಪಳ: ರೈತರಿಗೆ ಒಂದೆಡೆ ಕೊರೊನಾ ಸೋಂಕು ಸಂಕಷ್ಟ ತಂದೊಡ್ಡಿದ್ದರೆ ಮತ್ತೊಂದೆಡೆ, ಬಿತ್ತಿದ ಬೆಳೆಗಳಿಗೆ ಬೇರೆ ಬೇರೆ ರೋಗಗಳು ಇದೇ ಸಂದರ್ಭದಲ್ಲಿ ಬಾಧಿಸಲಾರಂಭಿಸಿವೆ.
ಇದರಿಂದಾಗಿ ಅನ್ನದಾತರಿಗೆ ಚಿಂತೆಯಿಂದ ಬಿಡುಗಡೆ ಇಲ್ಲ ಎಂಬಂತಾಗುತ್ತಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು ಹೆಸರು ಬೆಳೆದ ರೈತನ ತಲೆಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಕೊಪ್ಪಳ ರೈತರಿಗೆ ಎದುರಾಯ್ತು ಹೊಸ ತಲೆನೋವು: ಬೆಳೆ ಕೈಸೇರುವ ಮುನ್ನ ಹಳದಿ ರೋಗದ ಕಾಟ ಯಲಬುರ್ಗಾ ತಾಲೂಕಿನಲ್ಲಿ ಬಿತ್ತನೆ ಮಾಡಲಾಗಿರುವ ಹೆಸರು ಬೆಳೆಗೆ ಈಗ ಹಳದಿ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಹೆಸರು ಬೆಳೆ ಇಳುವರಿ ಕಡಿಮೆಯಾಗುವ ಆತಂಕ ರೈತರಲ್ಲಿ ಮೂಡಿದೆ. ಯಲಬುರ್ಗಾ ತಾಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಮುಂಗಾರು ಪೂರ್ವ ಮಳೆ ಈ ಭಾಗದಲ್ಲಿ ಉತ್ತಮವಾಗಿ ಆಗಿದ್ದರಿಂದ ಹೆಸರು ಬಿತ್ತನೆಗೆ ಪೂರಕ ವಾತಾವರಣವಿದ್ದು, ಯಲಬುರ್ಗಾ ಭಾಗದಲ್ಲಿ ಮುಂಗಾರಿನಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
ಈಗ ಪೈರು ಸಹ ಉತ್ತಮವಾಗಿದೆ. ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಯಲಬುರ್ಗಾ ತಾಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಯರೇಹಂಚಿನಾಳ ಸೇರಿದಂತೆ ಅನೇಕ ಭಾಗಗಳಲ್ಲಿ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಹಳದಿ ರೋಗ ಬಂದರೆ ಆ ಬೆಳೆ ಸರಿಯಾಗಿ ಬರುವುದಿಲ್ಲ, ಜೊತೆಗೆ ಇಳುವರಿ ಕುಗ್ಗುವ ಭೀತಿ ಸಹ ಎದುರಾಗಿದೆ.
ಈ ಕುರಿತು ಮಾತನಾಡಿದ ಬಿನ್ನಾಳ ಗ್ರಾಮದ ರೈತ ಜಗದೀಶ ಚಟ್ಟಿ, ಹಳದಿ ರೋಗ ನಿಯಂತ್ರಣಕ್ಕೆ ಔಷಧಿಗಳು ಸಿಗುತ್ತವೆಯಾದರೂ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಕೊರೊನಾ ಭೀತಿಯ ಆರ್ಥಿಕ ಸಂಕಷ್ಟದಲ್ಲಿ ಮತ್ತೆ ರೈತರಿಗೆ ಆರ್ಥಿಕ ಹೊರೆಯಾಗಲಿದೆ. ಜೊತೆಗೆ ಈಗ ಆಗುತ್ತಿರುವ ವಾತಾವರಣ ಬದಲಾವಣೆಯಿಂದ ಹಳದಿ ರೋಗ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಉತ್ತಮ ಮಳೆಯಾಗಿ, ಆರಂಭದಲ್ಲಿ ಒಳ್ಳೆಯ ಬೆಳೆ ಬಂದಿದ್ದರೂ ಅಂದುಕೊಂಡಷ್ಟು ಇಳುವರಿ ಬರುವುದಿಲ್ಲ ಎಂದಿದ್ದಾರೆ.