ಕುಷ್ಟಗಿ (ಕೊಪ್ಪಳ): ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಅನಕ್ಷರತೆ, ಮೌಢ್ಯತೆ, ನಿರುದ್ಯೋಗದಂತಹ ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ಸ್ವೀಕರಿಸಿದಾಗ ಮಾತ್ರ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ತಳವಗೇರಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಮಚಂದ್ರ ಬಡಿಗೇರ ಹೇಳಿದರು.
ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು: ಶಿಕ್ಷಕ ರಾಮಚಂದ್ರ ಬಡಿಗೇರ - Tahsildar M. Siddesh
ಕಲ್ಯಾಣ ಕರ್ನಾಟಕ ಭಾಗದ ಜನತೆ ಈಗಲೂ ಗುಳೆ ಹೋಗುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಅಸ್ತ್ರದಿಂದ ಆಲೋಚನೆಯ ದಿಕ್ಕು ಬದಲಾಗಬೇಕು. ಹಿಂದುಳಿದ್ದೇವೆ ಎನ್ನುತ್ತಾ ಕುಳಿತರೇ ಹಿಂದುಳಿದವರಾಗಿಯೇ ಇರುತ್ತೇವೆ ಎಂದು ತಳವಗೇರಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಮಚಂದ್ರ ಬಡಿಗೇರ ಹೇಳಿದರು.
ಕುಷ್ಟಗಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಈ ಭಾಗದ ಜನತೆ ಈಗಲೂ ಗುಳೆ ಹೋಗುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಅಸ್ತ್ರದಿಂದ ಆಲೋಚನೆಯ ದಿಕ್ಕು ಬದಲಾಗಬೇಕು. ಹಿಂದುಳಿದಿದ್ದೇವೆ ಎನ್ನುತ್ತಾ ಕುಳಿತರೇ ಹಿಂದುಳಿದವರಾಗಿಯೇ ಇರುತ್ತೇವೆ. ಹೈದರಾಬಾದ್ ಕರ್ನಾಟಕ ವಿಮೋಚನೆ ಬಳಿಕ 371 (ಜೆ) ಕಲಂ ಜಾರಿ ಹಿನ್ನೆಲೆಯಲ್ಲಿ ಕ್ರಮೇಣ ಬದಲಾವಣೆಗೆ ಕಾರಣವಾಗಿದೆ. ಈ ಭಾಗದಿಂದ ಐಎಎಸ್, ಐಪಿಎಸ್ ಪಾಸಾಗುತ್ತಿರುವುದು. ಕಿನ್ನಾಳ ಆಟಿಕೆ ಕ್ಲಸ್ಟರ್ ಆಗಿರುವುದು. ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ ಆಗುತ್ತಿರುವುದು ಗಮನಾರ್ಹ ಬದಲಾವಣೆ ಎಂದರು.
ತಹಶೀಲ್ದಾರ್ ಎಂ.ಸಿದ್ದೇಶ್ ಅವರು ಮಾತನಾಡಿ, ಶೈಕ್ಷಣಿಕವಾಗಿ ಪ್ರಗತಿಯಾಗದ ಹೊರತು ಅಭಿವೃದ್ಧಿ ನಿರೀಕ್ಷಿಸಿಸುವುದು ಅಸಾಧ್ಯವಾಗಿದೆ. ಪ್ರತಿ ಮನೆಯಲ್ಲೂ ಶಿಕ್ಷಣವಂತರಾಗಬೇಕು. ನಮ್ಮ ಹಿಂದುಳಿವಿಕೆಗೆ ಆರೋಗ್ಯ, ಶಿಕ್ಷಣ ಕಾರಣವಾಗುತ್ತಿದೆ. ಯಾರು ಶಿಕ್ಷಣವಂತರಾಗುತ್ತಾರೆ ಅವರು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಸಾಧ್ಯವಿದೆ. ಈ ಭಾಗದ ಯುವಕರು ಅಡ್ಡದಾರಿ ಹಿಡಿಯದೇ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಬೇಕಿದೆ ಎಂದು ಹೇಳಿದರು.