ಗಂಗಾವತಿ (ಕೊಪ್ಪಳ): ಮಾಧ್ವ ಪಂಥದ ಅನುಯಾಯಿಗಳ ಪ್ರಮುಖ ಧಾರ್ಮಿಕ ತಾಣವಾದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಜುಲೈ 6ರಿಂದ ಜುಲೈ 8ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಧಾರ್ಮಿಕ ಆಚರಣೆಗಳಿಗೆ ತಹಶೀಲ್ದಾರ್ ಮಂಜುನಾಥ ಹಿರೇಮಠ ಅವಕಾಶ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.
ನವ ವೃಂದಾವನ ಗಡ್ಡೆಯಲ್ಲಿ ಜುಲೈ 6 ರಿಂದ 8ರ ವರೆಗೆ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಮಹಿಮೋತ್ಸವ ಹಾಗೂ ಅದೇ ಸಮಯಕ್ಕೆ ಜುಲೈ 6ರಿಂದ 8ರ ವರೆಗೆ ರಾಯರಮಠದಿಂದ ಜಯತೀರ್ಥರ ಆರಾಧನೆ ಹಮ್ಮಿಕೊಳ್ಳಲು ಸಿದ್ಧತೆ ನಡೆದಿತ್ತು. ಈ ಬಗ್ಗೆ ಉಭಯ ಮಠಗಳ ಅನುಯಾಯಿಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಗಿತ್ತು. ಉಭಯ ಮಠಗಳು ಸಮನ್ವಯ ಸಾಧಿಸಿ ಧಾರ್ಮಿಕ ಆಚರಣೆಗೆ ಒಮ್ಮತ ವ್ಯಕ್ತವಾಗದ ಹಿನ್ನೆಲೆ ಪೂಜೆಗೆ ಅವಕಾಶ ನಿರಕಾರಿಸಲಾಗಿದೆ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಸೂಕ್ತ ತೀರ್ಪು ಹೊರ ಬೀಳುವವರೆಗೂ ತಾತ್ಕಾಲಿಕವಾಗಿ ಯಾವ ಮಠದ ಅನುಯಾಯಿಗಳಿಗೂ ನವವೃಂದಾವನದ ಗಡ್ಡೆಯಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಲಾಗದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ವಿವಾದ ಬಗೆಹರಿಸಲು ಮುಂದಾಗಿದ್ದ ಜಿಲ್ಲಾಡಳಿತ :ಉತ್ತರಾಧಿಮಠ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಮಧ್ಯೆ ಉದ್ಭವಿಸಿರುವ ಪೂಜೆ ವಿವಾದವನ್ನು ಬಗೆಹರಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿತ್ತು. ಈ ಸಂಬಂಧ ತಹಶೀಲ್ದಾರ್ ಮಂಜುನಾಥ ಹಿರೇಮಠ ಅವರು ಜೂನ್ 27ರ ಮಂಗಳವಾರ ಸಂಜೆ ಐದು ಗಂಟೆಗೆ ಎರಡೂ ಮಠಗಳ ಅನುಯಾಯಿಗಳ ಸಭೆಯನ್ನು ತಹಶೀಲ್ದಾರ್ ಕಚೇರಿಯಲ್ಲಿ ಕರೆದಿದ್ದರು. ಆದರೆ ಸಭೆ ಫಲಪ್ರದವಾಗದ ಕಾರಣ ಉಭಯ ಮಠಗಳಿಗೆ ಪೂಜೆಗೆ ಅವಕಾಶ ನಿರಾಕರಿಸಿ ಆದೇಶಿಸಿದ್ದಾರೆ.