ಕೊಪ್ಪಳ: ಬಿಜೆಪಿ ಸರ್ಕಾರ ಬಂದ ಮೇಲೆ ಕಳ್ಳಕಾಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಹೊಸಪೇಟೆಗೆ ತೆರಳುವ ಮಾರ್ಗಮಧ್ಯದಲ್ಲಿ ಕೊಪ್ಪಳದಲ್ಲಿ ಮಾತನಾಡಿದ ಅವರು, ಕಳ್ಳಕಾಕರು ಎಂದರೆ ಬೇರೆ ಯಾರೂ ಅಲ್ಲ, ತಿಹಾರ್ ಜೈಲಿಗೆ ಹೋಗಿ ಬಂದವರು. ಕಾಂಗ್ರೆಸ್ನವರೆಲ್ಲರೂ ಭ್ರಷ್ಟಾಚಾರದ ಹಿನ್ನೆಲೆ ಇರುವವರು. ನಮ್ಮ ಸರ್ಕಾರ ಬಂದ ಮೇಲೆ ಇಂದು ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತಾಗಿದೆ. ರಾಜಕೀಯದ ಹೆಸರಿನಲ್ಲಿ ಅವರು ಹಣ ಗಳಿಸಲು ವಿಫಲರಾಗುತ್ತಿದ್ದಾರೆ. ಇಂತಹವರು ಇಂದು ನಿರುದ್ಯೋಗಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಇತಿಮಿತಿಯಲ್ಲಿ ಮಾತನಾಡುವಂತೆ ಸೂಚನೆ ನೀಡಲಾಗಿದೆ. ಅವರ ವರ್ತನೆ ಕುರಿತು ದೆಹಲಿಯ ಶಿಸ್ತುಸಮಿತಿಗೆ ತಿಳಿಸಲಾಗಿದೆ. ಪಕ್ಷ ಆಂತರಿಕವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತದೆ. ತಮ್ಮ ವರ್ತನೆಯನ್ನು ಸರಿಪಡಿಸುವಂತೆ ಯತ್ನಾಳ್ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ಸರಿಪಡಿಸಿಕೊಳ್ಳದಿದ್ದರೆ ಅದು ಅವರ ಕರ್ಮ ಎಂದರು.