ಕರ್ನಾಟಕ

karnataka

ETV Bharat / state

ರೊಟ್ಟಿ ಪಂಚಮಿ: ಭಾವೈಕ್ಯತೆ ಹಾಗೂ ಬಾಂಧವ್ಯದ ಸಂಕೇತ ಈ 'ರೊಟ್ಟಿ ಹಬ್ಬ'! - ಕೊಪ್ಪಳ ನ್ಯೂಸ್​

ಉತ್ತರ ಕರ್ನಾಟಕ ಭಾಗದಲ್ಲಿ ರೊಟ್ಟಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ನಾಗರಪಂಚಮಿ ಹಬ್ಬದಲ್ಲಿ ರೊಟ್ಟಿಗೂ ಸಹ ಒಂದು ದಿನ ಹಬ್ಬ ಮಾಡಲಾಗುತ್ತದೆ. ಭಾವೈಕ್ಯತೆ ಹಾಗೂ ಬಾಂಧವ್ಯದ ಸಂಕೇತ ಈ ರೊಟ್ಟಿ, ಇಂದು ಕೊಪ್ಪಳದಲ್ಲಿ ರೊಟ್ಟಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

nagarapanammi-festival-is-fusion-of-rotti-and-emotion

By

Published : Aug 3, 2019, 8:20 PM IST

ಕೊಪ್ಪಳ: ನಾಗರಪಂಚಮಿ ಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ಭಾಗದ ದೊಡ್ಡ ಹಬ್ಬಗಳಲ್ಲಿ ಒಂದಾಗಿರುವ ನಾಗರಪಂಚಮಿ ಹಬ್ಬದಲ್ಲಿ ರೊಟ್ಟಿಗೂ ಸಹ ಒಂದು ದಿನ ಹಬ್ಬ ಮಾಡಲಾಗುತ್ತದೆ. ಭಾವೈಕ್ಯತೆ ಹಾಗೂ ಬಾಂಧವ್ಯದ ಸಂಕೇತವಾಗಿರುವ ಈ ರೊಟ್ಟಿ ಹಬ್ಬವನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸಲಾಯಿತು.

ನಾಗರಪಂಚಮಿ ಹಬ್ಬದಲ್ಲಿ ರೊಟ್ಟಿ ಹಬ್ಬ

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರೊಟ್ಟಿಗೆ ಒಂದು ವಿಶೇಷ ಸ್ಥಾನವಿದೆ. ರೊಟ್ಟಿ ಈ ಪ್ರದೇಶದ ಮುಖ್ಯ ಆಹಾರ ಖಾದ್ಯ(Staple food). ರೊಟ್ಟಿ ಊಟ ಮಾಡಿದರೆ ಈ ಭಾಗದ ಜನರಿಗೆ ಊಟ ಕಂಪ್ಲೀಟ್ ಆದಂಗೆ. ಇಂತಹ ರೊಟ್ಟಿಗೆ ನಾಗರಪಂಚಮಿಯಲ್ಲಿ ಒಂದು ದಿನ ಹಬ್ಬ ಆಚರಿಸಲಾಗುತ್ತದೆ. ರೊಟ್ಟಿ ಹಬ್ಬವೆಂದೇ ಕರೆಯುವ ಈ ಆಚರಣೆಗೆ ಬಗೆಬಗೆಯ ರೊಟ್ಟಿಗಳು ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ವಿನಿಮಯವಾಗುತ್ತವೆ. ನಾಗರಪಂಚಮಿಯ ಹಬ್ಬದ ನಾಲ್ಕನೇ ದಿನದಂದು ರೊಟ್ಟಿ ಹಬ್ಬ ಆಚರಿಸಲಾಗುತ್ತದೆ.

ಬಾಯಲ್ಲಿ ನೀರೂರಿಸುವ ಖಡಕ್ ರೊಟ್ಟಿಗಳು..

ರೊಟ್ಟಿ ಹಬ್ಬಕ್ಕಾಗಿ ವಾರದ ಮೊದಲೇ ಬಗೆಬಗೆಯ ರೊಟ್ಟಿಗಳು ತಯಾರಾಗುತ್ತವೆ. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಎಳ್ಳು ಹಚ್ಚಿದ ಜೋಳದ ಖಡಕ್ ರೊಟ್ಟಿ, ಎಳ್ಳು ಹಚ್ಚಿ ಸಜ್ಜಿಯ ಖಡಕ್ ರೊಟ್ಟಿಗಳು ತಯಾರು ಮಾಡಲಾಗುತ್ತದೆ. ಇನ್ನು ಹೆಸರುಕಾಳು, ಮಡಿಕೆಕಾಳು ಸೇರಿದಂತೆ ಅನೇಕ ಕಾಳಿನ ಪಲ್ಯಗಳು, ವಿವಿಧ ತರಕಾರಿಗಳ ಪಲ್ಯಗಳು, ಗುರೆಳ್ಳು, ಅಗಸಿ, ಶೇಂಗಾ, ಪುಠಾಣಿಯ ಚಟ್ನಿಪುಡಿಗಳು, ಹಸಿ ಸೊಪ್ಪಿನ ಪಚಡಿ ಹೀಗೆ ಬಗೆಬಗೆಯ ಪಲ್ಯಗಳನ್ನು ಮಾಡಿ ರೊಟ್ಟಿಯೊಂದಿಗೆ ಊಟ ಮಾಡಲಾಗುತ್ತದೆ. ರೊಟ್ಟಿ ಹಬ್ಬದ ಇಡೀ ಒಂದು ದಿನ ರೊಟ್ಟಿ ಹಾಗೂ ಪಲ್ಯಗಳ ಊಟವೇ ಮುಖ್ಯವಾಗಿರುತ್ತದೆ. ಇದನ್ನು ನೋಡಿದರೆ ಬಾಯಲ್ಲಿ ನೀರೂರುತ್ತದೆ. ತಮ್ಮ ಮನೆಯಲ್ಲಿ ಮಾಡಿರುವ ರೊಟ್ಟಿ ಪಲ್ಯಗಳನ್ನು ನೆರೆಹೊರೆಯವರಿಗೆ, ಸಂಬಂಧಿಕರ ಮನೆಗೆ ಹೋಗಿ ಕೊಟ್ಟು ಬರುತ್ತಾರೆ.

ರೊಟ್ಟಿಗಳ ವಿನಿಮಯದಲ್ಲಿ ತೊಡಗಿರುವ ಹೆಣ್ಣು ಮಕ್ಕಳು

ಈ ರೊಟ್ಟಿ ಹಬ್ಬದ ಸಂಭ್ರಮ ನೋಡೋದೇ ಒಂದು ಚಂದದ ಅನುಭವ. ಪಂಚಮಿ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ರೊಟ್ಟಿ ಹಬ್ಬಕ್ಕೆ ಬೇಕಾದ ವಿವಿಧ ಬಗೆಯ ರೊಟ್ಟಿಗಳನ್ನು ವಾರದ ಮುಂಚೆಯೇ ಮಾಡುತ್ತೇವೆ. ರೊಟ್ಟಿ ಹಬ್ಬದಂದು ಒಂದಿಷ್ಟು ಬಿಸಿರೊಟ್ಟಿಗಳನ್ನು ಸಹ ಮಾಡಿಕೊಳ್ಳುತ್ತೇವೆ. ಅದರೊಂದಿಗೆ ಬಗೆ ಬಗೆಯ ಪಲ್ಯ, ಚಟ್ನಿ, ಸೊಪ್ಪಿನ ಪಚಡಿ ಮಾಡಿ ಅದನ್ನು ದೇವರಿಗೆ ನೈವೇದ್ಯ ಮಾಡಿ ನೆರೆಹೊರೆಯವರಿಗೆ ಹಂಚುತ್ತೇವೆ. ನೆರೆಹೊರೆಯವರು ನಮಗೂ ರೊಟ್ಟಿಗಳನ್ನು ತಂದುಕೊಡುತ್ತಾರೆ. ಇದು ಒಂದು ರೀತಿಯಲ್ಲಿ ಭಾವೈಕ್ಯತೆಯನ್ನು ಬಿಂಬಿಸುತ್ತದೆ. ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಹಬ್ಬವಾಗಿರುವ ನಾಗರಪಂಚಮಿಯಲ್ಲಿ ರೊಟ್ಟಿ ಹಬ್ಬ ವಿಶೇಷ ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ಭಾಗ್ಯನಗರದ ನಿವಾಸಿಯಾಗಿರುವ ಗೃಹಿಣಿ ಅನುಸೂಯಾ ಗಣಪತಿ ಗೋಂದ್ಕರ್ ಅವರು.

ಅವರಿವರೆನ್ನದೆ ಎಲ್ಲರ ಮನೆಗೂ ಸಹ ರೊಟ್ಟಿ ಹಬ್ಬದಲ್ಲಿ ರೊಟ್ಟಿಗಳು ವಿನಿಮಯವಾಗುವ ಮೂಲಕ ಭಾವೈಕ್ಯತೆ ಹಾಗೂ ಬಾಂಧವ್ಯವನ್ನು ಸಾರುತ್ತವೆ. ಒಂದೊಂದು ಹಬ್ಬದ ಆಚರಣೆ ಹಿಂದೆಯೂ ಸಹ ಒಂದು ಸಂದೇಶವಿರುತ್ತದೆ ಮತ್ತು ಒಂದು ಕಾರಣವಿರುತ್ತದೆ. ಹೀಗಾಗಿ ನಮ್ಮ ಹಿರಿಯರು ಹಬ್ಬಗಳ ಆಚರಣೆಯನ್ನು ರೂಢಿಗೆ ತಂದಿದ್ದಾರೆ ಅನ್ನೋದು ಸತ್ಯ.

ABOUT THE AUTHOR

...view details