ಗಂಗಾವತಿ(ಕೊಪ್ಪಳ):ಕಳೆದ ವರ್ಷ ಹನುಮಾಲೆ ಧರಿಸಿಕೊಂಡು ಈ ಭಾಗದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಒದಗಿಸುವಂತೆ ದೇವರಲ್ಲಿ ಪಾರ್ಥನೆ ಮಾಡಿ ಸಂಕಲ್ಪ ತೊಟ್ಟಿದ್ದೆ. ಸಂಕಲ್ಪದ ಭಾಗವಾಗಿ ಮೊದಲ ಶುಭಸೂಚನೆ ಸಿಕ್ಕಿದ್ದು, ಜನ ನನ್ನನ್ನು ಈ ಕ್ಷೇತ್ರದಿಂದ ಆಯ್ಕೆ ಮಾಡಿದ್ದಾರೆ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಪಂಪಾಸರೋವರದಲ್ಲಿ ಶುಕ್ರವಾರ ಹನುಮಾಲೆ ಧರಿಸಿದ ಬಳಿಕ ಮಾತನಾಡಿದ ಅವರು, ಮುಂದೊಂದು ದಿನ ನನ್ನ ಕನಸಿನ ಕರ್ನಾಟಕ ಅಭಿವೃದ್ಧಿಪಡಿಸಲು ಆಶೀರ್ವಾದ ಮಾಡು ಎಂದು ಪ್ರಾರ್ಥಿಸಿದ್ದೆ. ಮೊದಲ ಬೇಡಿಕೆಗೆ ದೇವರು ಆಶೀರ್ವಾದಿಸಿದ್ದಾನೆ. ಕಿಷ್ಕಿಂಧೆಯನ್ನು ಇಡೀ ದೇಶ ನೋಡುವಂತೆ ಅಭಿವೃದ್ಧಿ ಮಾಡಲು ಆಂಜನೇಯ ಸ್ವಾಮಿ ಆಶೀರ್ವಾದ ಮಾಡಬೇಕು ಎಂದರು.
ಲೋಕಸಭೆ ಚುನಾವಣೆಗಾಗಿ ಸಮಾವೇಶ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವ ವಿಚಾರ ಕುರಿತು ಮಾತನಾಡಿದ ಅವರು, 2024ರ ಜನವರಿ 11ನೇ ತಾರೀಖು ಕೊಪ್ಪಳದಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾವೇಶ ಮಾಡುವೆ. ಈ ಸಮಾವೇಶದಲ್ಲಿ ಆರು ಜಿಲ್ಲೆಯ ಕಾರ್ಯಕರ್ತರು, ಪಕ್ಷದ ಪ್ರಮುಖರು, ನನ್ನ ಅಭಿಮಾನಿಗಳು ಭಾಗವಹಿಸುವರು. ಲೋಕಸಭೆಗೆ ನಾಲ್ಕರಿಂದ ಆರು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕುವೆ. ಅಭ್ಯರ್ಥಿಗಳನ್ನು ಗೆಲ್ಲಿಸಲು ರಾತ್ರಿ ಹಗಲು ಕೆಲಸ ಮಾಡುವೆ ಎಂದು ತಿಳಿಸಿದರು.