ಕೊಪ್ಪಳ: ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಸಿಎಂ ಯಡಿಯೂರಪ್ಪ ಅವರು ಆ ಸಮುದಾಯದ ಕೆಲ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜ್ಯ ಮುಸ್ಲಿಂ ಚಿಂತಕರ ಚಾವಡಿಯ ಮುಖಂಡ ಪೀರಭಾಷಾ ಆರೋಪಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಸಮುದಾಯಗಳ ಅಭಿವೃದ್ಧಿಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಎಂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅಲ್ಪ ಸಮುದಾಯಗಳಿಗೆಂದು ಸರ್ಕಾರದಲ್ಲಿ ಈಗಾಗಲೇ ಜಾರಿಯಲ್ಲಿದ್ದ ಕಾಲೋನಿ ಅಭಿವೃದ್ಧಿ ಮತ್ತು ಶಾದಿ ಭಾಗ್ಯ ಯೋಜನೆಯನ್ನು ಯಾವುದೇ ಚರ್ಚೆ ಇಲ್ಲದೆ ರದ್ದುಗೊಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇದ್ದ ಸ್ಕಾಲರ್ಶಿಪ್ ಯೋಜನೆಯಿಂದ ರಾಜ್ಯದ ಸುಮಾರು 12.5 ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗುತ್ತಿತ್ತು. ಇದಕ್ಕೆ ಮೀಸಲಾಗಿದ್ದ ಅನುದಾನ ಸಹ ಸ್ಥಗಿತಗೊಂಡಿದೆ ಎಂದರು.