ಗಂಗಾವತಿ:ಗ್ರಾಮದೇವತೆ ದುರುಗಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬೇರೂನಿ ಮಸೀದಿಯಿಂದ ಬೃಹತ್ ಹೂವಿನ ಹಾರವನ್ನು ಮುಸ್ಲಿಂ ಬಾಂಧವರು ಮೆರವಣಿಗೆ ಮೂಲಕ ತಂದು ದೇವಿಗೆ ಅರ್ಪಿಸಿ ಸೌಹಾರ್ದತೆ ಮೆರೆದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನೇತೃತ್ವದಲ್ಲಿ ಮುಸ್ಲಿಂ ಸಮಾಜದ ಮುಖಂಡರು ರಥಕ್ಕೆ ದೊಡ್ಡ ಹೂವಿನ ಹಾರ ಸಮರ್ಪಿಸಿ ಭಕ್ತಿ ಪ್ರದರ್ಶಿಸಿದರು.
ಬಳಿಕ ಹಿರಿಯ ಮುಖಂಡರಾದ ಶಾಮೀದ ಮನಿಯಾರ, ಸೈಯದ್ ಅಲಿ ಮೊದಲಾದವರು ದೇಗುಲಕ್ಕೆ ಭೇಟಿ ನೀಡಿ, ದೇವಿಗೆ ಹಣ್ಣು ಕಾಯಿ ಕರ್ಪೂರದ ಸೇವೆ ಸಲ್ಲಿಸಿ ಗಮನ ಸೆಳೆದರು.
ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು 2018ರಲ್ಲಿ ನಗರದಲ್ಲಿ ನಡೆದಿದ್ದ ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಎರಡು ಕೋಮಿನ ಮಧ್ಯೆ ಘರ್ಷಣೆ ಉಂಟಾಗಿ ಇಡೀ ವಾರ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆಗ ದೊಡ್ಡ ಉಭಯ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಯಾಗಿತ್ತು.
ರಾಜ್ಯದ ಗಮನ ಸೆಳೆದಿದ್ದ ಈ ಘಟನೆಯಿಂದಾಗಿ ನಗರವನ್ನು ಮತೀಯ ಕಲಹದ ಸೂಕ್ಷ್ಮ ಕೇಂದ್ರ ಎಂದು ಗುರುತಿಸಲಾಗಿತ್ತು. ಇದೀಗ ಪರಸ್ಪರ ಸೌಹಾರ್ದ ವಾತಾವರಣ ನಿರ್ಮಾಣ ಆಗುತ್ತಿರುವುದು ನಗರದಲ್ಲಿ ನೆಮ್ಮದಿಗೆ ಕಾರಣವಾಗಿದೆ.