ಗಂಗಾವತಿ:ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವತಿ ಸೇರಿದಂತೆ 6 ಜನರ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಮೃತನ ಸಹೋದರ ಪರಶುರಾಮ ಭೋವಿ ಎಂಬುವವರು ದೂರು ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಸಂಗಾಪುರ ಗ್ರಾಮದ ಕೋತಿಸ್ವಾಮಿ, ಲಕ್ಷ್ಮಿಬಾಯಿ ಗಂಗಾಧರ, ರವಿ ಹನುಮಂತಪ್ಪ, ಯುವತಿ ಅನಿತಾ ಹಾಗೂ ಹಿರೇಜಂತಕಲ್ ರಾಜು ವಿರುಪಣ್ಣ ಎಂಬುವವರು ಮೇಲೆ ಕೊಲೆ ಆರೋಪದ ಪ್ರಕರಣ ದಾಖಲಾಗಿದೆ.
ಸಂಗಾಪುರದ ಭೋವಿ ಸಮುದಾಯ ಹನುಮೇಶ ಎಂಬ ಯುವಕನ ಮೃತ ದೇಹ ಗ್ರಾಮದ ಮಾವಿನ ತೋಟವೊಂದರಲ್ಲಿ ಪತ್ತೆಯಾಗಿತ್ತು. ಲಂಬಾಣಿ ಸಮುದಾಯದ ಅನಿತಾ ಎಂಬ ಯುವತಿಯನ್ನು ಕಳೆದ ಹಲವು ವರ್ಷದಿಂದ ಈ ಯುವಕ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಆಕೆಯ ಪಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎನ್ನಲಾದ ರವಿ ಹನುಮಂತ ಕೂಡ ಭಾಗಿಯಾಗಿದ್ದಾನೆ ಎಂದು ಮೃತನ ಸಹೋದರ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಹನುಮೇಶ ಎಂಬ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹೇಳಿದರು.
ಹನುಮೇಶ ಹಾಗೂ ಅದೇ ಗ್ರಾಮದ ಅಪ್ರಾಪ್ತೆ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಇಬ್ಬರು ಕಾಣೆಯಾಗಿರುವುದಕ್ಕೆ ಪೋಷಕರು ಹುಡುಕಾಟ ನಡೆಸಿದ್ದರು. ಆದರೆ ಯುವಕನ ಶವ ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತಂತೆ ಯುವಕನ ಪೋಷಕರು ಇದು ಕೊಲೆ ಎಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 6 ಜನರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ:ಅನ್ಯಕೋಮಿನ ಯುವತಿ ಜೊತೆ ಪ್ರೀತಿ-ಪ್ರೇಮ-ಪ್ರಣಯ: ತೋಟದಲ್ಲಿ ಬಿತ್ತು ಯುವಕನ ಹೆಣ