ಕುಷ್ಟಗಿ(ಕೊಪ್ಪಳ) :ಅ.27ರಂದು ನಿಗದಿಯಾಗಿರುವ ಕುಷ್ಟಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಗೆ ಆಗಮಿಸುವ ಬಿಜೆಪಿ ಸಮ್ಮಿಶ್ರ ಸದಸ್ಯರ ಸುರಕ್ಷತೆಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಅವರೆಲ್ಲ ಒಟ್ಟಾಗಿ ಚುನಾವಣೆ ನಡೆಯುವ ಸ್ಥಳ ಹಾಗೂ ತಾ.ಪಂ.ಗೆ ಆಗಮಿಸುವ ಮಾಹಿತಿ ಲಭ್ಯವಾಗಿದೆ.
ಕೊಪ್ಪಳ ಸಮೀಪದ ಅಜ್ಞಾತ ಸ್ಥಳದಲ್ಲಿರುವ ಬಿಜೆಪಿಯ 8, ಕಾಂಗ್ರೆಸ್ನ 2, ಪಕ್ಷೇತರ 2 ಹಾಗೂ ಅವಿರೋಧ ಆಯ್ಕೆಯಾದ ಓರ್ವ ಸದಸ್ಯ ಸೇರಿದಂತೆ 13 ಸದಸ್ಯರು ಒಟ್ಟಿಗೆ ಆಗಮಿಸುವರು. ಈ ಸದಸ್ಯರೊಂದಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಸಾಥ್ ನೀಡುವರು. ಈ ಸದಸ್ಯರು ಆಗಮಿಸುವ ಮುಂಚೆ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಫಾರ್ಮ್ನಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ತಿಳಿಸಿವೆ.
ಪುರಸಭೆ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನ 21ನೇ ವಾರ್ಡ್ ಸದಸ್ಯ ಗಂಗಾಧರಸ್ವಾಮಿ ಹಿರೇಮಠ (GK) ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವರು. ಸಾಮಾನ್ಯ ಮಹಿಳಾ ಸ್ಥಾನದ ಉಪಾಧ್ಯಕ್ಷ ಸ್ಥಾನ ಮಂಗಳವಾರ ಚುನಾವಣೆಯವರೆಗೂ ಸಸ್ಪೆನ್ಸ್ ಆಗಿದೆ. ಉಪಾಧ್ಯಕ್ಷ ಸ್ಥಾನ 30 ತಿಂಗಳ ಅವಧಿಯ ಅಧಿಕಾರಾವಧಿ ತಲಾ 15 ತಿಂಗಳು ಇಬ್ಬರಿಗೆ ಇಲ್ಲವೇ ತಲಾ 10 ತಿಂಗಳು ಮೂರು ಜನರಿಗೆ ಹಂಚಿಕೆಯಾಗುವ ಸಾದ್ಯತೆಗಳಿವೆ ಎನ್ನಲಾಗುತ್ತಿದೆ.
ಬಲಾಬಲ ಕಮಲ ಪ್ರಬಲ
ಕಾಂಗ್ರೆಸ್ 12, ಬಿಜೆಪಿ 8, ಪಕ್ಷೇತರ 2, ಅವಿರೋಧ ಆಯ್ಕೆ ಸೇರಿದಂತೆ ಒಟ್ಟು 23 ಸದಸ್ಯರಿದ್ದಾರೆ. ಸರಳ ಬಹುಮತ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ನಲ್ಲೇ ತಮ್ಮ ಇಬ್ಬರು ಸದಸ್ಯರು ಮಗ್ಗಲು ಮುಳ್ಳಾಗಿದ್ದಾರೆ. ಇಬ್ಬರು ಸದಸ್ಯರು ಬಿಜೆಪಿ ಬೆಂಬಲಿಸಿದ್ದು, ಪಕ್ಷೇತರ ಇಬ್ಬರು, ಅವಿರೋಧ ಅಯ್ಕೆ ಓರ್ವ ಸದಸ್ಯ ಸೇರಿದಂತೆ 13 ಸದಸ್ಯರ ಬಲದಿಂದ ಬಿಜೆಪಿ ಪ್ರಬಲವಾಗಿದೆ. ಸರಳ ಬಹುಮತ ಕಾಂಗ್ರೆಸ್ನಲ್ಲೀಗ 10 ಸ್ಥಾನಗಳಿಗೆ ಕುಸಿದಿದ್ದು, ಪ್ರತಿಪಕ್ಷಕ್ಕೆ ತೃಪ್ತರನ್ನಾಗಿಸಿದೆ.