ಕೊಪ್ಪಳ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಇಂಡಿಯಾ ಘಟಬಂಧನ್ ಜತೆ ಗುರುತಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಮೂರು ಪಕ್ಷಗಳ ಜನ ವಿರೋಧಿ ನೀತಿಯ ಬಗ್ಗೆ ತಿಳಿಸಬೇಕಿದೆ. ಉಳಿದೆಲ್ಲ ಚುನಾವಣೆಗಳಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ನನ್ನ ಆಶಯ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರಿಗೆ ಗೊಂದಲ ಆಗಬಾರದು. ಅ.14ರಂದು ದೆಹಲಿಗೆ ತೆರಳುತ್ತಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವೆ. ನಾನೀಗ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಲು ಮುಂದಾಗಿರುವೆ. ನಾಲ್ಕಾರು ಹಳ್ಳಿಗಳ ಜನರನ್ನು ಸೇರಿಸಿ ಅವರ ಬಳಿ ಚರ್ಚಿಸಿ ಮೂರು ಪಕ್ಷಗಳನ್ನು ತಿರಸ್ಕರಿಸುವಂತೆ ಮನವಿ ಮಾಡುತ್ತಿದ್ದೇವೆ. ಜನತೆಗೆ ಪರ್ಯಾಯ ಪಕ್ಷ ಬೇಕೆನಿಸಿದಲ್ಲಿ ನಾವಿದ್ದೇವೆ ಎಂಬ ಸಂದೇಶ ಸಾರುತ್ತಿದ್ದೇವೆ ಎಂದರು.
ಆಪ್ನಿಂದ ಬದಲಾವಣೆ ಸಾಧ್ಯ:ಉತ್ತರ ಭಾರತದಲ್ಲಿ ಮಾಡಿದಂತೆ ನಾವು ಇಲ್ಲಿ ಸದ್ಯಕ್ಕೆ ಕ್ರಾಂತಿ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಆದರೆ, ಬದಲಾವಣೆ ಮಾಡುತ್ತೇವೆ. ಹಣ, ಜಾತಿ, ಅಧಿಕಾರದಲ್ಲಿ ವಿಪಕ್ಷಗಳಷ್ಟು ನಾವು ಬಲಾಢ್ಯರಿಲ್ಲ. ಹೀಗಾಗಿ ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಜಿಲ್ಲೆಗೆ ತೆರಳಿ ಪಕ್ಷ ಬಲಪಡಿಸುತ್ತೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಿದ್ಧಾಂತಗಳು ಚೆನ್ನಾಗಿವೆ. ಆದರೆ, ಅವುಗಳ ಅನುಷ್ಠಾನ ಅತ್ಯಂತ ಕೆಟ್ಟದಾಗಿದೆ. ಗ್ಯಾರಂಟಿ ಕಾಂಗ್ರೆಸ್ ಸ್ವಂತ ಯೋಜನೆ ಅಲ್ಲ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಯೋಜನೆಗಳನ್ನು ಕದ್ದು ಜಾರಿ ಮಾಡಿದ್ದಾರೆ. ಆದರೆ, ಅವರಂತೆ ಮುಂದಾಲೋಚನೆ ಇಲ್ಲದೆ ಅನುಷ್ಠಾನಕ್ಕೆ ಮುಂದಾಗಿದ್ದು, ಎಸ್ಸಿ, ಎಸ್ಟಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ರೈತರ ವಿದ್ಯುತ್ ಕಸಿದಿದ್ದಾರೆ ಎಂದು ಹರಿಹಾಯ್ದರು.