ಕುಷ್ಟಗಿ(ಕೊಪ್ಪಳ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಯನ್ನ ಸರ್ವಿಸ್ ರಸ್ತೆಗೆ ಕಲ್ಪಿಸಿ ರೈತರ ಜಮೀನು ಸಂಪರ್ಕ ರಸ್ತೆಗೆ ತೊಂದರೆಯಾಗದಂತೆ ಕೆಲಸ ಮಾಡಿ ಎಂದು ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ (ಓಎಸ್ಇ) ಕಂಪನಿ ಯೋಜನಾ ವ್ಯವಸ್ಥಾಪಕ ರಾಮಪ್ಪ ಕುಬಕಡ್ಡಿ ಅವರಿಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಾಕೀತು ಮಾಡಿದರು.
ನಗರದ ಹೆದ್ದಾರಿ ಮೇಲ್ಸೇತುವೆ ಲೋಕಾರ್ಪಣೆ ಪೂರ್ವ ಸಿದ್ದತೆ ಪರಿಶೀಲನೆ ವೇಳೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಇಲ್ಲಿ ಬ್ರಾಹ್ಮಣ ಸೇರಿದಂತೆ ಜನಿವಾರ ಸಮುದಾಯದ ಸ್ಮಶಾನ ಇದ್ದು, ಇದರಲ್ಲಿ ಚರಂಡಿ ನೀರು ನುಗ್ಗುತ್ತಿತ್ತು. ಮೂಲತಃ ಇದು ರೈತಾಪಿ ವರ್ಗದ ಜಮೀನಾಗಿದ್ದು, ಸಂಪರ್ಕ ರಸ್ತೆ ಇದರಲ್ಲಿಯೇ ಚರಂಡಿ ನೀರು ಹರಿಯುತ್ತಿತ್ತು. ರೈತರು, ಚರಂಡಿ ಮಾರ್ಗ ತಿರುವಿ ರಸ್ತೆ ಮಾಡಿಕೊಂಡಿದ್ದರು. ಇದರಲ್ಲಿ ಪುನಃ ಚರಂಡಿ ಮಾರ್ಗ ಕಲ್ಪಿಸಿದರೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು.